ಉಡುಪಿ ಬಸ್ ನಿಲ್ದಾಣದಲ್ಲಿ ಟೈಮಿಂಗ್ಸ್ ವಿವಾದಕ್ಕೆ ಖಾಸಗಿ ಬಸ್ಸಿಗೆ ಮತ್ತೊಂದು ಬಸ್ ಢಿಕ್ಕಿ; ₹1.5 ಲಕ್ಷ ನಷ್ಟ, ಚಾಲಕ ಸೇರಿ ನಾಲ್ವರ ವಿರುದ್ಧ ಬಿಎನ್‌ಎಸ್ ಅಡಿ ಪ್ರಕರಣ ದಾಖಲು

Prakhara News
2 Min Read

ಉಡುಪಿ : ಉಡುಪಿ ನಗರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕೆಮ್ಮಣ್ಣು-ಹೂಡೆ ಮಾರ್ಗದ ಖಾಸಗಿ ಬಸ್ಸುಗಳ ನಡುವೆ ಟೈಮಿಂಗ್ಸ್ ವಿಚಾರವಾಗಿ ತೀವ್ರ ಜಟಾಪಟಿ ನಡೆದಿದ್ದು, ಮುಂಡಿನ ಬಸ್ಸಿಗೆ ಉದ್ದೇಶಪೂರ್ವಕವಾಗಿಯೇ ಎರಡು ಬಾರಿ ಢಿಕ್ಕಿ ಹೊಡೆದು ಜಖಂಗೊಳಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ/ಖಾಸಗಿ ಆಸ್ತಿ ನಷ್ಟ ಸಂಭವಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಸ್ ಚಾಲಕ ಸಲ್ಮಾನ್ ಮತ್ತು ನಾಲ್ವರು ಸಿಬ್ಬಂದಿಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಮಲ್ಪೆ ಬಡನಿಡಿಯೂರು ನಿವಾಸಿ, KA-19-D-8000 ನಂಬರಿನ ಬಸ್ ಚಾಲಕ ಕೆ. ವೈಭವ್ ಪೈ (21) ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನ ವಿವರಗಳ ಪ್ರಕಾರ, ದಿನಾಂಕ 04/07/2026 ರಂದು ಶನಿವಾರ ರಾತ್ರಿ 9:15 ರ ಸಮಯಕ್ಕೆ ವೈಭವ್ ಪೈ ಚಾಲಕರಾಗಿದ್ದ ಬಸ್ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಲು ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿತ್ತು. ಇವರ ಬಸ್ಸಿನ ಮುಂಭಾಗದಲ್ಲಿ KA-19-C-6852 ನಂಬರಿನ ಮತ್ತೊಂದು ಬಸ್ ನಿಂತಿತ್ತು. ಈ ಬಸ್ ನಿಯಮದ ಪ್ರಕಾರ ರಾತ್ರಿ 8:53 ಕ್ಕೆ ಉಡುಪಿಯಿಂದ ಹೂಡೆಗೆ ಹೊರಡಬೇಕಾಗಿತ್ತು. ಆದರೆ ರಾತ್ರಿ 9:00 ಗಂಟೆಯಾದರೂ ಆ ಬಸ್ಸು ಅಲ್ಲಿಂದ ಕದಲಲಿಲ್ಲ. ಇದನ್ನು ಗಮನಿಸಿದ ವೈಭವ್ ಪೈ ಅವರ ಬಸ್ಸಿನ ಕಂಡಕ್ಟರ್, “ಬಸ್ಸು ಯಾಕೆ ಇನ್ನು ಹೊರಡಲಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಎದುರಾಳಿ ಬಸ್ಸಿನ ಸಿಬ್ಬಂದಿ “ನಮ್ಮ ಬಸ್ಸು ಹಾಳಾಗಿದೆ, ಸ್ಟಾರ್ಟ್ ಆಗ್ತಿಲ್ಲ, ಇವತ್ತು ಹೂಡೆಗೆ ಹೋಗುವುದಿಲ್ಲ” ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ.

ಎದುರಾಳಿ ಬಸ್ಸು ಚಲಿಸದ ಕಾರಣ, ಚಾಲಕ ವೈಭವ್ ಪೈ ಅವರು ತಮ್ಮ ಬಸ್ಸನ್ನು (KA-19-D-8000) ಆ ಬಸ್ಸಿನ ಮುಂಭಾಗಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಲು ಯತ್ನಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ KA-19-C-6852 ನಂಬರಿನ ಬಸ್ಸಿನ ಚಾಲಕ ಸಲ್ಮಾನ್, ವೈಭವ್ ಅವರ ಬಸ್ ಮುಂದಕ್ಕೆ ಹೋಗಬಾರದು ಎಂಬ ಕ್ರೂರ ಉದ್ದೇಶದಿಂದ, ತನ್ನ ಬಸ್ಸನ್ನು ಚಲಾಯಿಸಿ ವೈಭವ್ ಅವರ ಬಸ್ಸಿನ ಎಡಭಾಗಕ್ಕೆ ಜೋರಾಗಿ ಎರಡು ಬಾರಿ ಢಿಕ್ಕಿ ಹೊಡೆದಿದ್ದಾನೆ. ಭೀಕರ ಢಿಕ್ಕಿಯ ಪರಿಣಾಮ ವೈಭವ್ ಅವರ ಬಸ್ಸಿನ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಬರೋಬ್ಬರಿ ₹1,50,000 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಅಪಘಾತದ ಬೆನ್ನಲ್ಲೇ ಎದುರಾಳಿ ಬಸ್ಸಿನ ಕಂಡಕ್ಟರ್ ರೋಷನ್ ಹಾಗೂ ಸಹಚರರಾದ ಶಾರುಖ್, ಅಫ್ರೋಜ್ ಮತ್ತು ನವಾಜ್ ಎಂಬುವವರು ಒಟ್ಟಾಗಿ ಸೇರಿಕೊಂಡು ಚಾಲಕ ವೈಭವ್ ಪೈ ಮತ್ತು ಅವರ ಬಸ್ಸಿನ ಸಿಬ್ಬಂದಿಗಳನ್ನು ಸಾರ್ವಜನಿಕವಾಗಿ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment