“ಧಾರ್ಮಿಕ ಹಿನ್ನೆಲೆಯ ನಾಡ ಹಬ್ಬದಲ್ಲಿ ಕಂಬಳ ಸೇರಿಸುವುದು ಸರಿಯಲ್ಲ”: ಯದುವೀರ್ ಒಡೆಯರ್ ತೀವ್ರ ವಿರೋಧ

Prakhara News
2 Min Read

ಮೈಸೂರು : “ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ತನ್ನದೇ ಆದ ಸುದೀರ್ಘ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯನ್ನು ಹೊಂದಿದೆ. ಇಂತಹ ಪವಿತ್ರ ಹಬ್ಬದಲ್ಲಿ ಪ್ರದರ್ಶನದ ಉದ್ದೇಶಕ್ಕಾಗಿ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಸೇರಿಸುವುದು ಸಾಂಸ್ಕೃತಿಕವಾಗಿ ಸರಿಯಲ್ಲ” ಎಂದು ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇರವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶನಿವಾರ ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಸಾಂಸ್ಕೃತಿಕ ನೀತಿ ಹಾಗೂ ಬರಗಾಲದ ನಡುವೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ನಡೆಯನ್ನು ತೀವ್ರವಾಗಿ ಖಂಡಿಸಿದರು. “ಕಂಬಳವು ಕರಾವಳಿಯ ತುಳುನಾಡಿನ ಮಣ್ಣಿನ ಕ್ರೀಡೆಯಾಗಿದ್ದು, ಅದಕ್ಕೆ ತನ್ನದೇ ಆದ ಗರಿಷ್ಠ ಗೌರವ, ಮಹತ್ವ ಹಾಗೂ ದೈವಿಕ ಹಿನ್ನೆಲೆ ಇದೆ. ಆದರೆ, ಕರಾವಳಿಯ ಆಚರಣೆಯನ್ನು ಕೇವಲ ಪ್ರದರ್ಶನದ ವಸ್ತುವನ್ನಾಗಿ ಮೈಸೂರಿಗೆ ತಂದು ದಸರಾದಲ್ಲಿ ನಡೆಸುವುದು ಸಮಂಜಸವಲ್ಲ. ಆಯಾ ನೆಲದ ಆಚರಣೆಗಳು ಮತ್ತು ಕ್ರೀಡೆಗಳು ಆಯಾ ಸಾಂಸ್ಕೃತಿಕ ವಲಯದಲ್ಲೇ ನಡೆದರೆ ಮಾತ್ರ ಅದಕ್ಕೊಂದು ಅರ್ಥ ಮತ್ತು ಗೌರವ ಇರುತ್ತದೆ” ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.

ಇದೇ ವೇಳೆ ಸರ್ಕಾರದ ಆರ್ಥಿಕ ವೆಚ್ಚವನ್ನು ಪ್ರಶ್ನಿಸಿದ ಸಂಸದರು, “ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ರೈತರಿಗೆ ಬೆಳೆ ಬೆಳೆಯಬೇಡಿ, ನೀರಿಗಾಗಿ ಒತ್ತಡ ಹಾಕಬೇಡಿ ಎಂದು ಬಹಿರಂಗವಾಗಿ ಮನವಿ ಮಾಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕೇವಲ 2 ದಿನಗಳ ಕಾಲ ಮೈಸೂರಿನಲ್ಲಿ ಕಂಬಳ ನಡೆಸಲು ಬರೋಬ್ಬರಿ ₹8 ಕೋಟಿ ರೂಪಾಯಿ ಸಾರ್ವಜನಿಕರ ಹಣವನ್ನು ವ್ಯಯಿಸಲು ಹೊರಟಿರುವುದು ಎಷ್ಟು ಸರಿ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಈ ಹಿಂದೆ ಬರಗಾಲ ಎದುರಾದಾಗ ದಸರಾವನ್ನು ಅತ್ಯಂತ ಸರಳವಾಗಿ ನಡೆಸಿದ ಹತ್ತಾರು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಪ್ರಸ್ತುತ ಮಳೆಯಿಲ್ಲದೆ ರಾಜ್ಯದ ಜನ, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ದಸರಾವನ್ನು ಸರಳವಾಗಿ ನಡೆಸಲು ತೀರ್ಮಾನಿಸಿದರೆ ರಾಜವಂಶಸ್ಥರಾಗಿ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಅದನ್ನು ಬಿಟ್ಟು ಸಂಕಷ್ಟದ ಸಮಯದಲ್ಲಿ ದುಬಾರಿ ವೆಚ್ಚದ ಪ್ರದರ್ಶನಗಳನ್ನು ಆಯೋಜಿಸುವ ಅಗತ್ಯವಿಲ್ಲ” ಎಂದು ಯದುವೀರ್ ಒಡೆಯರ್ ಖಡಕ್ ಆಗಿ ನುಡಿದರು.

Share This Article
Leave a Comment