ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಮತ್ತೆ ಅವಕಾಶ : 2022ರ ನಿಷೇಧ ಆದೇಶ ಹಿಂಪಡೆದ ಸರ್ಕಾರ,ಮನೆಗಳಲ್ಲಿ ಪಾಲಿಸುವ ಧಾರ್ಮಿಕ ಆಚರಣೆಗಳಿಗೆ ಮಾತ್ರ ಕೇಸರಿ ಶಾಲಿಗೆ ಅವಕಾಶ.

Prakhara News
1 Min Read

ಬೆಂಗಳೂರು : ರಾಜ್ಯ ಸರ್ಕಾರವು 2022ರಲ್ಲಿ ಜಾರಿಗೊಂಡಿದ್ದ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದು, ಶಾಲೆ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ನಾಲ್ಕು ವರ್ಷಗಳ ಬಳಿಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧಾರಣೆಗೆ ವಿಧಿಸಿದ್ದ ನಿರ್ಬಂಧವನ್ನು ವಾಪಸ್ ಪಡೆಯಲಾಗಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಜೊತೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. “ಮಕ್ಕಳ ಮಾನಸಿಕ ಹಿತದೃಷ್ಟಿಯಿಂದ ಹಾಗೂ ಧಾರ್ಮಿಕ ಆಚರಣೆಗಳಿಗೆ ಗೌರವ ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದರು.

ಆದೇಶದಲ್ಲಿ ಏನಿದೆ?:
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರ ಕಡ್ಡಾಯವಾಗಿರಲಿದೆ. ಸಮವಸ್ತ್ರದೊಂದಿಗೆ ಸೀಮಿತ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ಹಿಜಾಬ್, ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟಿ/ಟರ್ಬನ್ ಸೇರಿದಂತೆ ಧಾರ್ಮಿಕ ಚಿಹ್ನೆಗಳಿಗೆ ಅನುಮತಿ ನೀಡಲಾಗಿದೆ. ಇವುಗಳಿಂದ ಶಿಸ್ತು, ಭದ್ರತೆ ಅಥವಾ ವಿದ್ಯಾರ್ಥಿಗಳ ಗುರುತಿನ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಧಾರ್ಮಿಕ ಸಂಕೇತ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತರಗತಿ, ಪರೀಕ್ಷೆ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. “ಕೇಸರಿ ಶಾಲು ವಿಚಾರಕ್ಕೆ ಈಗಲೇ ತೀರ್ಮಾನ ಇಲ್ಲ”

ಹಿಜಾಬ್‌ಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕೇಸರಿ ಶಾಲು ಧರಿಸುವ ಪ್ರಶ್ನೆ ಉದ್ಭವಿಸುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, “ಯಾರಾದರೂ ವಿವಾದ ಸೃಷ್ಟಿಸಿದರೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕಾನೂನಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು” ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ:
ಹಿಜಾಬ್ ವಿವಾದ ಸಂಬಂಧ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನು ಹೈಕೋರ್ಟ್ ಸಮರ್ಥಿಸಿತ್ತು. ಬಳಿಕ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಭಜಿತ ತೀರ್ಪು ನೀಡಿದ್ದರಿಂದ, ಪ್ರಕರಣ ಇನ್ನೂ ಸಂವಿಧಾನ ಪೀಠದ ಮುಂದೆ ಬಾಕಿಯಿದೆ.

Share This Article
Leave a Comment