ಮಂಗಳೂರು: ಆನ್‌ಲೈನ್ ಇನ್ವೆಸ್ಟ್‌ಮೆಂಟ್ ಹೆಸರಲ್ಲಿ ಭಾರಿ ವಂಚನೆ -16 ಲಕ್ಷ ಹಣ ಕಳೆದುಕೊಂಡ 61 ವರ್ಷದ ವೃದ್ಧೆ..!

Prakhara News
1 Min Read

ಮಂಗಳೂರು: ಫೇಸ್‌ಬುಕ್ ಜಾಹೀರಾತು ಹಾಗೂ ಟೆಲಿಗ್ರಾಂ ಆಪ್ ಮೂಲಕ ಹೆಚ್ಚಿನ ಲಾಭದ ಆಮಿಷ ಒಡ್ಡಿ 61 ವರ್ಷದ ಮಹಿಳೆಯಿಂದ ಒಟ್ಟು ₹16,20,372 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಭಾರಿ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಪಿರ್ಯಾದಿದಾರರಾದ 61 ವರ್ಷದ ವೃದ್ಧೆ ಏಪ್ರಿಲ್ 2026 ರಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ‘Sevexa Investment’ ಎಂಬ ಹಣ ಹೂಡಿಕೆಯ ಜಾಹೀರಾತು ಕಂಡಿತ್ತು.

ಅದರಲ್ಲಿದ್ದ ಲಿಂಕ್ ಒತ್ತಿ ಅವರು ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿದ್ದರು. ಬಳಿಕ ಅಪರಿಚಿತ ವ್ಯಕ್ತಿಗಳು ವಿದೇಶಿ ಫೋನ್ ಸಂಖ್ಯೆಗಳಾದ (+447508497577 ಹಾಗೂ +447711262158) ಮೂಲಕ ವಾಟ್ಸಾಪ್/ಕರೆ ಮಾಡಿ, ಹಣ ಹೂಡಿಕೆ ಮಾಡಿದರೆ ಶೇ. ನೂರರಷ್ಟು ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ನಂಬಿಸಿದ್ದರು.

ಅಪರಿಚಿತರ ಮಾತು ಸತ್ಯವೆಂದು ನಂಬಿದ ಮಹಿಳೆ ಮೊದಲಿಗೆ ಏಪ್ರಿಲ್ 18, 2026 ರಂದು ₹20,372 ಹಣವನ್ನು ನೀಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ತದನಂತರ ಜೂನ್ 12 ರಂದು ₹3,00,000, ಜೂನ್ 22 ರಂದು ₹3,00,000, ಜೂನ್ 24 ರಂದು ₹4,00,000 ಹಾಗೂ ಜೂನ್ 30, 2026 ರಂದು ₹6,00,000 ಹಣವನ್ನು ಸೈಬರ್ ಚೋರರ ಖಾತೆಗೆ ಆನ್‌ಲೈನ್ ಮೂಲಕ ಕಳುಹಿಸಿದ್ದಾರೆ. ಹೀಗೆ ಏಪ್ರಿಲ್ 18 ರಿಂದ ಜೂನ್ 30 ರವರೆಗೆ ಒಟ್ಟು ₹16,20,372 ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. ತಾವು ಮೋಸ ಹೋಗಿರುವುದು ಅರಿವಿಗೆ ಬಂದ ಬಳಿಕ ಮಹಿಳೆ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment