ಮಂಗಳೂರಿನ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಯುವ ನ್ಯಾಯವಾದಿ ಅಸ್ಗರ್ ಮುಡಿಪು ಸಂತಾಪ

Prakhara News
1 Min Read

ಮಂಗಳೂರು: ಮಂಗಳೂರಿನ ಖಾಝಿ ಹಾಗೂ ಗೌರವಾನ್ವಿತ ಧಾರ್ಮಿಕ ವಿದ್ವಾಂಸರಾದ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ಹಾಗೂ ಬೇಸರವನ್ನುಂಟುಮಾಡಿದೆ.

ಅವರೊಂದಿಗೆ ನನಗೆ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆತ್ಮೀಯ ಪರಿಚಯ ಮತ್ತು ಒಡನಾಟ ಬೆಳೆದಿತ್ತು. ಅವರು ಅತ್ಯಂತ ಸರಳ, ಸಜ್ಜನಿಕೆಯುಳ್ಳ, ವಿನಯಶೀಲ ಹಾಗೂ ಎಲ್ಲ ವರ್ಗದ ಜನರೊಂದಿಗೆ ಸಮಾನ ಪ್ರೀತಿ ಮತ್ತು ಗೌರವದಿಂದ ವರ್ತಿಸುತ್ತಿದ್ದ ಅಪರೂಪದ ವ್ಯಕ್ತಿತ್ವವಾಗಿದ್ದರು. ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಭೇದಗಳನ್ನು ಮೀರಿ ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಅವರು ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯ ಪ್ರತೀಕವಾಗಿದ್ದರು.

ಕರ್ನಾಟಕದಲ್ಲಿ ಸಮಸ್ತರ ಐಕ್ಯತೆ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಲು ಅವರು ಅಪಾರ ಶ್ರಮವಹಿಸಿದ್ದರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದ ಅವರು ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನ ದೀಪವನ್ನು ಬೆಳಗಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ತಮ್ಮ ಇಡೀ ಜೀವನವನ್ನು ಇಸ್ಲಾಮಿನ ಶ್ರೇಷ್ಠ ಮೌಲ್ಯಗಳ ಪ್ರಚಾರ, ಶಿಕ್ಷಣದ ವಿಸ್ತರಣೆ ಹಾಗೂ ಸಮಾಜದ ಏಳಿಗೆಗಾಗಿ ಸಮರ್ಪಿಸಿದ ಅವರು ಅಸಂಖ್ಯಾತ ಜನರ ಪ್ರೀತಿಪಾತ್ರ ಮಾರ್ಗದರ್ಶಕರಾಗಿದ್ದರು. ಅವರ ಅಪಾರ ಜ್ಞಾನ, ವಿನಯಶೀಲತೆ, ದೂರದೃಷ್ಟಿ, ನಾಯಕತ್ವ ಹಾಗೂ ಸಮನ್ವಯದ ಚಿಂತನೆಗಳು ಸದಾ ಸಮಾಜದ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ.

ಅವರ ಅಗಲಿಕೆಯು ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ.
ಅಲ್ಲಾಹ್ ತಆಲಾ ಅವರು ಮರಹೂಂ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರಿಗೆ ಜನ್ನತುಲ್ ಫಿರ್ದೌಸ್‌ನಲ್ಲಿ ಅತ್ಯುನ್ನತ ಸ್ಥಾನವನ್ನು ದಯಪಾಲಿಸಲಿ. ಅವರ ಸತ್ಕಾರ್ಯಗಳನ್ನು ಸದಖಾ ಜಾರಿಯಾ ಆಗಿ ಸ್ವೀಕರಿಸಲಿ. ಹಾಗೂ ಅವರ ಕುಟುಂಬಸ್ಥರು, ಶಿಷ್ಯರು, ಬಂಧು-ಬಳಗ, ಅಭಿಮಾನಿಗಳು ಮತ್ತು ಸಮಸ್ತ ಸಮಾಜಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ, ಸಾಂತ್ವನ ಮತ್ತು ಸಹನೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Share This Article
Leave a Comment