ಮಂಗಳೂರು : ಆ.11ರಂದು ತುಳುನಾಟಕ ಕಲಾವಿದರ ಒಕ್ಕೂಟದ ವಾರ್ಷಿಕ ಸಂಭ್ರಮ.

Prakhara News
2 Min Read
Oplus_131072

ಮಂಗಳೂರು : 2003ರಲ್ಲಿ ತುಳುನಾಟಕ ರಂಗದ 12 ವಿಭಾಗಗಳ ಪ್ರತಿನಿಧಿಗಳನ್ನು ಒಳಗೊಂಡು ಸ್ಥಾಪನೆಗೊಂಡು ನೋಂದಣಿಗೊಂಡಿರುವ ತುಳುನಾಟಕ ಕಲಾವಿದರ ಒಕ್ಕೂಟ 21ನೇ ವರ್ಷಕ್ಕೆ ಕಾಲಿಟ್ಟಿದೆ. ಒಕ್ಕೂಟದ ವತಿಯಿಂದ ಕಳೆದ ಹಲವು ವರ್ಷಗಳಿಂದ ವಾರ್ಷಿಕ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು ಹಾಗೂ ತಂತ್ರಜ್ಞರಿಗೆ ಸನ್ಮಾನ, ಆರ್ಥಿಕವಾಗಿ ಅಶಕ್ತ ಕಲಾವಿದರಿಗೆ ಧನಸಹಾಯ ಹಾಗೂ ಕೀರ್ತಿಶೇಷರಾದ ಕಲಾವಿದರ ಸ್ಮರಣಾರ್ಥ ‘ನೆಂಪು’ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

2009ರಲ್ಲಿ ತುಳುನಾಟಕ ಕಲಾವಿದರ ಕ್ಷೇಮನಿಧಿ ಸ್ಥಾಪಿಸಿ, ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ನೀಡುವ ಯೋಜನೆ ಆರಂಭಿಸಲಾಗಿದೆ. ಅಲ್ಲದೆ, ಕಲಾವಿದರಿಗೆ ಸಮೂಹ ವೈದ್ಯಕೀಯ ವಿಮೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕಲಾವಿದರ ವಿಮಾ ಕಂತು ಪಾವತಿಯ ವ್ಯವಸ್ಥೆ ಮಾಡಲಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಲಾವಿದರ ಅಪಘಾತ ವಿಮಾ ಸೌಲಭ್ಯವನ್ನು ನಾಟಕ ಕಲಾವಿದರಿಗೂ ವಿಸ್ತರಿಸಲಾಗಿದ್ದು, 600ಕ್ಕೂ ಅಧಿಕ ನಾಟಕ ಕಲಾವಿದರಿಗೆ ಅಪಘಾತ ವಿಮೆ ಒದಗಿಸಲಾಗಿದೆ. ಆ.11ರಂದು ವಾರ್ಷಿಕ ಸಂಭ್ರಮ 2026-27ನೇ ಸಾಲಿನ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸನ್ಮಾನ, ‘ನೆಂಪು’ ಕಾರ್ಯಕ್ರಮ ಮತ್ತು ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ಆ.11ರಂದು ಮಂಗಳವಾರ ಸಂಜೆ 5 ಗಂಟೆಯಿಂದ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ಈ ಸಾಲಿನ ತೌಳವ ಪ್ರಶಸ್ತಿಯನ್ನು ಹಿರಿಯ ನಾಟಕಕಾರ, ನಟ, ಕಲಾ ನಿರ್ದೇಶಕ ಹಾಗೂ ಸಾಹಿತಿ ತಮ್ಮ ಲಕ್ಷ್ಮಣ ಅವರಿಗೆ ಪ್ರದಾನಿಸಿ ಗೌರವಿಸಲಾಗುವುದು. ಹಿರಿಯ ನಾಟಕ ಕಲಾವಿದರಾದ ತಿಮ್ಮಪ್ಪ ಶೆಟ್ಟಿ ಬೋಳಾರ, ದಿನೇಶ್ ಮಾಸ್ಟರ್ ಬಿಜೈ, ನಾಗೇಶ ಸಾಲಿಯಾನ್ ಕಂಕನಾಡಿ, ಉಲ್ಲಾಸ್ ಕದ್ರಿ, ವಿಶ್ವನಾಥ ಚಿತ್ರಾಪುರ ಹಾಗೂ ಸುಜಾತ ಶಕ್ತಿನಗರ ಅವರನ್ನು ಸನ್ಮಾನಿಸಲಾಗುವುದು. ‘ನೆಂಪು’ ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ಬಾಬು ಭಟ್ ಶರವು, ದಯಾನಂದ ಶರವು, ವಿ.ಜಿ. ಪಾಲ್ ಬೊಕ್ಕಪಟ್ಲ ಹಾಗೂ ಜೆ. ಸಸೀತಾರಾಮ ಶೆಟ್ಟಿ ಪಚ್ಚನಾಡಿ ಅವರನ್ನು ಸ್ಮರಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಸಂಜೆ 4ರಿಂದ 5ರವರೆಗೆ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಲಘು ಉಪಹಾರದ ವ್ಯವಸ್ಥೆ ಇರಲಿದೆ. ಸಭಾ ಕಾರ್ಯಕ್ರಮದ ಬಳಿಕ ಉಮೇಶ್ ಮಿಜಾರ್ ಸಾರಥ್ಯದ ‘ನಮ್ಮ ಕಲಾವಿದೆರ್ ಬೆದ್ರ’ ತಂಡದಿಂದ ‘ವೈರಲ್ ವೈಶಾಲಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ತುಳು ನಾಟಕ ರಂಗದ ಕಲಾವಿದರು, ತಂತ್ರಜ್ಞರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಕ್ಷೇಮನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ, ಕೋಶಾಧಿಕಾರಿ ಮೋಹನ ಕೊಪ್ಪಲ, ಉಪಾಧ್ಯಕ್ಷರಾದ ಗೋಕುಲ್ ಕದ್ರಿ ಹಾಗೂ ತಾರಾನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.

Share This Article
Leave a Comment