ಮಂಗಳೂರು: ಮನೆ ಬಾಡಿಗೆ ನೆಪದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ – ಇಬ್ಬರು ಆರೋಪಿಗಳ ಬಂಧನ

Prakhara News
2 Min Read

ಮಂಗಳೂರು : ಮುಡಿಪು ಸಮೀಪದ ಕಾಯೆರ್ ಗೋಳಿಯಲ್ಲಿ 76 ವರ್ಷದ ವೃದ್ಧೆಯ ಮೇಲೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಣಾಜೆ ಪೊಲೀಸ್ ಠಾಣೆಯ ವಿಶೇಷ ತಂಡ ಯಶಸ್ವಿಯಾಗಿದೆ. ಬೊಕ್ಕಪಟ್ಟಣ ನಿವಾಸಿ ಬಾಲಸುಬ್ರಹ್ಮಣ್ಯಂ (49) ಹಾಗೂ ಆಟೋ ರಿಕ್ಷಾ ಮಾಲೀಕ, ಮಣ್ಣಗುಡ್ಡ ನಿವಾಸಿ ಶ್ಯಾಮ್ ಕುಮಾರ್ (33) ಬಂಧಿತ ಆರೋಪಿಗಳು.

ಆಗಸ್ಟ್ 3ರಂದು ಮಧ್ಯಾಹ್ನ 1.15ರ ಸುಮಾರಿಗೆ ಮುಡಿಪು ಕಾಯೆರ್ ಗೋಳಿಯ ಭವಾನಿ ಆಚಾರ್ಯ (76) ಎಂಬುವರು ಮನೆಯಲ್ಲಿ ಒಂಟಿಯಾಗಿದ್ದಾಗ, ಮನೆ ಬಾಡಿಗೆ ನೆಪದಲ್ಲಿ ಬಂದ ಆರೋಪಿಗಳು ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಬಲವಂತವಾಗಿ ಒಳನುಗ್ಗಿ, ವೃದ್ಧೆಯನ್ನು ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕುತ್ತಿಗೆಯಲ್ಲಿದ್ದ ಸರ ಹಾಗೂ ಬಳೆ ಸೇರಿದಂತೆ ₹3 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತರಿಂದ ದರೋಡೆ ಮಾಡಿದ್ದ ಸಂಪೂರ್ಣ 24 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯ ವೇಳೆ ಆರೋಪಿಗಳು ಕೆಲವು ದಿನಗಳ ಹಿಂದೆ ಹಲಸಿನ ಹಣ್ಣು ಖರೀದಿಸುವ ನೆಪದಲ್ಲಿ ಇದೇ ವೃದ್ಧೆಯ ಮನೆಗೆ ಬಂದು, ಹಗಲು ವೇಳೆ ಆಕೆ ಒಂಟಿಯಾಗಿರುವುದನ್ನು ಖಚಿತಪಡಿಸಿಕೊಂಡು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ. ಮುಖ್ಯ ಆರೋಪಿ ಬಾಲಸುಬ್ರಹ್ಮಣ್ಯಂ ವಿರುದ್ಧ ಬಜಪೆ, ಮುಲ್ಕಿ, ಮಂಗಳೂರು ಈಸ್ಟ್, ನಾರ್ತ್ ಹಾಗೂ ರೂರಲ್ ಠಾಣೆಗಳಲ್ಲಿ ಈಗಾಗಲೇ ಹಲವು ಸುಲಿಗೆ ಮತ್ತು ಕಳವು ಪ್ರಕರಣಗಳು ದಾಖಲಾಗಿವೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ವಿಜಯ ಕ್ರಾಂತಿ ಅವರ ಮಾರ್ಗದರ್ಶನದಲ್ಲಿ ಉಳ್ಳಾಲ ಇನ್ಸ್‌ಪೆಕ್ಟರ್ ವಿರೂಪಾಕ್ಷ ಸ್ವಾಮಿ, ಕೊಣಾಜೆ ಪಿಎಸ್‌ಐ ನಾಗರಾಜ್ ಹಾಗೂ ತಂಡ ಈ ಸುಸಜ್ಜಿತ ಕಾರ್ಯಾಚರಣೆ ನಡೆಸಿದೆ. ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ಅಪರಿಚಿತರಿಗೆ ಬಾಗಿಲು ತೆರೆಯುವ ಮುನ್ನ ಎಚ್ಚರ ವಹಿಸಬೇಕು ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.

Share This Article
Leave a Comment