ರಾಮನಗರ : ಬೆಂಗಳೂರು-ಮೈಸೂರು ದಶಪಥ ಎಕ್ಸ್ಪ್ರೆಸ್ವೇನಲ್ಲಿ ಶನಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ರಾಮನಗರ ತಾಲೂಕಿನ ಅವರಗೆರೆ ಗೇಟ್ ಬಳಿ ಈ ದುರ್ಘಟನೆ ನಡೆದಿದೆ.


ಕೇರಳದಿಂದ ಬೆಂಗಳೂರಿನ ಕಡೆಗೆ ಪ್ರಯಾಣಿಕರೊಂದಿಗೆ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್, ರಾಮನಗರ ತಾಲೂಕಿನ ಅವರಗೆರೆ ಗೇಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ದಿಕ್ಸೂಚಿ ಫಲಕಕ್ಕೆ (ಸೈನ್ ಬೋರ್ಡ್) ಬಸ್ ಅತೀವ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಹೊಡೆತಕ್ಕೆ ಬಸ್ ಎಕ್ಸ್ಪ್ರೆಸ್ವೇನಲ್ಲೇ ಪಲ್ಟಿಯಾಗಿದೆ.

ಅಪಘಾತದ ತೀವ್ರತೆಗೆ ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್ನಲ್ಲಿದ್ದ ಹಲವು ಪ್ರಯಾಣಿಕರಿಗೆ ತೀವ್ರ ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯರ ನೆರವಿನಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಕಾರಣ ಎಕ್ಸ್ಪ್ರೆಸ್ವೇನಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಬಿಡದಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬಸ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಈ ದುರ್ಘಟನೆಯ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


