ಮಂಗಳೂರು : ರಾತ್ರಿ ಬೀಟ್ ಕರ್ತವ್ಯದ ಪೊಲೀಸರ ಮೇಲೆ ಹಲ್ಲೆ : ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ.

Prakhara News
1 Min Read

ಮಂಗಳೂರು : ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೇ 24ರಂದು ಮುಂಜಾನೆ ಸುಮಾರು 2.10ರ ವೇಳೆಗೆ ಕೋಡಿಕಲ್‌ನ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕೆಂಪು ಬಣ್ಣದ ಎಲೆಕ್ಟ್ರಿಕಲ್ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಯುವಕರು ದಾಳಿ ನಡೆಸಿದ್ದರು. ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಸಿಮೆಂಟ್ ಶೀಟ್ ತುಂಡಿನಿಂದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದ ಪರಿಣಾಮ ಗಂಭೀರ ಗಾಯವಾಗಿತ್ತು.

ಘಟನೆ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 121(1), 109, 132 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿದ ಆರೋಪದಡಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಬೆನ್ನುಹತ್ತಿದ ಸಿಸಿಬಿ ಹಾಗೂ ಉರ್ವ ಠಾಣೆ ಪೊಲೀಸರು, ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಕೇರಳದ ಕಾಞಂಗಾಡ್ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೇ 26ರಂದು ಬಂಧಿಸಿ ಉರ್ವ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅರಸಿನಮಕ್ಕಿ, ಕೊಕ್ಕಡ, ಬೆಳ್ತಂಗಡಿ ತಾಲೂಕಿನ ಸಚಿನ್ ಕೆ.ಆರ್ (24), ನೆಲ್ಯಾಡಿ, ಪುತ್ತೂರು ತಾಲೂಕಿನ ಚಂದನ್ (24) ಎಂದು ತಿಳಿದುಬಂದಿದೆ. ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಚಿನ್ ಕುಂಟಿಕಾನದ ಪಾನ್ ಪಾನ್ ಸ್ವೀಟ್ಸ್ ಕಾರ್ಖಾನೆಯಲ್ಲಿ ಚಾಲಕನಾಗಿ ಹಾಗೂ ಚಂದನ್ ಕೂಳೂರಿನ ಅದ್ವತ್ ಕಿಯಾ ಶೋರೂಮ್‌ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

Share This Article
Leave a Comment