ಉಡುಪಿ : ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲೆ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ.ಉದ್ಯಾವರ ಪಿತ್ರೋಡಿ ನಿವಾಸಿ ಹರ್ಷಿತ್ ಶೆಟ್ಟಿ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.


ಮಂಗಳವಾರ ಮುಂಜಾನೆ 5 ಗಂಟೆಗೆ ಬೋಳಾರುಗುಡ್ಡೆ ಮೈದಾನದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹರ್ಷಿತ್ ಶೆಟ್ಟಿ ಹೊರಟಿದ್ದನು. ಆದರೆ, ಎಂದಿನ ಸಮಯ ಕಳೆದರೂ ಆತ ಮನೆಗೆ ವಾಪಸ್ ಬಂದಿರಲಿಲ್ಲ. ಆತನ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಈ ನಡುವೆ ಉದ್ಯಾವರದ ಪಾಪನಾಶಿನಿ ನದಿಯ ಸೇತುವೆಯ ಮೇಲೆ ಹರ್ಷಿತ್ ಅವರ ದ್ವಿಚಕ್ರ ವಾಹನ ಪತ್ತೆಯಾಗಿದ್ದರಿಂದ ಆತ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು.

ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣವೇ ಕರಾವಳಿಯ ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಈಶ್ವರ ಮಲ್ಪೆ ಮತ್ತು ಅವರ ತಂಡದವರು ನದಿಯ ಆಳವಾದ ನೀರಿನಲ್ಲಿ ಸುದೀರ್ಘ ಹುಡುಕಾಟ ನಡೆಸಿದ್ದಾರೆ. ತೀವ್ರ ಕಾರ್ಯಾಚರಣೆಯ ನಂತರ ಮಂಗಳವಾರ ಸಂಜೆಯ ವೇಳೆಗೆ ಹರ್ಷಿತ್ ಶೆಟ್ಟಿ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಹರ್ಷಿತ್ ಶೆಟ್ಟಿ ಅವರ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಸಂಬಂಧ ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



