ಮಂಗಳೂರು: ಮುಂಬರುವ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಮಂಗಳೂರು ದಸರಾ ಸೇರಿದಂತೆ ಪ್ರಮುಖ ಹಬ್ಬಗಳ ಪ್ರಯುಕ್ತ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಹಾಗೂ ನವೀಕರಣ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.


ಸಂಪರ್ಕ ರಸ್ತೆಗಳ ಕಾಮಗಾರಿ, ಎಲ್ಲಾ ರಸ್ತೆಗಳ ದುರಸ್ತಿ, ಶೋಭಾ ಯಾತ್ರೆ ಸಾಗುವ ರಸ್ತೆಯ ವಿಭಜಕ ಮತ್ತು ಪುಟ್ಪಾತ್ ಗಳಿಗೆ ಬಣ್ಣ, ದಾರಿ ದೀಪ ವ್ಯವಸ್ಥೆ, ವಿದ್ಯುತ್ ದೀಪ ಅಲಂಕಾರ, ರಸ್ತೆಯ ಬದಿಯ ಕಸ-ಮಣ್ಣು ತೆರೆವುಗೊಳಿಸುವುದು, ಶೋಭಾಯಾತ್ರೆ ಸಾಗುವ ರಸ್ತೆಯ ಮರದ ಗೆಲ್ಲುಗಳನ್ನು ಅರಣ್ಯ ಇಲಾಖೆ ನಿಯಮದಂತೆ ತೆರವುಗೊಳಿಸುವುದು, ಹಬ್ಬ ಮುಗಿದ ನಂತರ ಅಂಗಡಿ ಮಳಿಗೆಯವರು ಬಿಟ್ಟು ಹೋಗುವ ಅನಗತ್ಯ ಸಾಮಾಗ್ರಿಗಳನ್ನು ತೆರವುಗೊಳಿಸುವುದು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವ ಕಾರ್ಯಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಕೋರಿದರು.

ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಉರ್ವ, ಲಾಲ್ ಭಾಗ್, ಕೆಎಸ್ಆರ್ಟಿಸಿ ಜಂಕ್ಷನ್, ಕುದ್ರೋಳಿ ದೇವಸ್ಥಾನ ಪರಿಸರ, ಸೂಟರ್ ಪೇಟೆ, ಅಶೋಕ ನಗರ, ಗೋವಿಂದ ಪೈ ವೃತ್ತ, ಕಾರ್ ಸ್ಟ್ರೀಟ್, ಡೊಂಗರಕೇರಿ, ಮಂಗಳಾದೇವಿ, ಎಮ್ಮೆಕೆರೆ ಕ್ರಾಸ್, ಬೋಳಾರ, ದೇವರಪದವು-ಅಂಬೇಡ್ಕರ್ ಕಾಲೋನಿ, ಸೇರಿದಂತೆ ನಗರದ ಎಲ್ಲಾ ಪ್ರಮುಖ ಭಾಗಗಳಲ್ಲಿ ಶೀಘ್ರವಾಗಿ ಅಗತ್ಯ ಕ್ರಮವಾಗಬೇಕಿದೆ ಎಂದರು.



