ಉಡುಪಿ : ಮಂಗಳೂರಿನಿಂದ ಉಡುಪಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಯೇಣಗುಡ್ಡೆ ತೇಕಲ್ ತೋಟದ ಬಳಿ ರಸ್ತೆ ವಿಭಾಜಕದ (ಡಿವೈಡರ್) ಮೇಲೇರಿ ಸಂಭವಿಸಿದ ಅಪಘಾತದಲ್ಲಿ ಚಾಲಕ ಹಾಗೂ ರೋಗಿ ಸೇರಿದಂತೆ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.


ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತಿವೇಗವಾಗಿ ಧಾವಿಸುತ್ತಿದ್ದ ಆಂಬುಲೆನ್ಸ್, ಕಟಪಾಡಿ ಜಂಕ್ಷನ್ ದಾಟಿದ ತಕ್ಷಣ ಸಿಗುವ ಯೇಣಗುಡ್ಡೆ ತೇಕಲ್ ತೋಟದ ಡಿವಿಯೇಟರ್ ಬಳಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಬೃಹತ್ ವೇಗದಲ್ಲಿದ್ದ ವಾಹನ ಹೆದ್ದಾರಿ ವಿಭಾಜಕದ ಮೇಲೇರಿ, ಬಳಿಕ ಉಡುಪಿ-ಮಂಗಳೂರು ವಿರುದ್ಧದ ರಸ್ತೆಯನ್ನು ದಾಟಿ ಪಕ್ಕಕ್ಕೆ ಸರಿದು ನಿಂತಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದವರು ಹಾಗೂ ಸವಾರರು ಓಡಿ ಬಂದು ಆಂಬುಲೆನ್ಸ್ ನಲ್ಲಿದ್ದವರನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಆಂಬುಲೆನ್ಸ್ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಮತ್ತೊಂದು ಆಂಬುಲೆನ್ಸ್ ತರೆಸಿ ರೋಗಿ ಹಾಗೂ ಇತರರನ್ನು ಉಡುಪಿಯ ಆಸ್ಪತ್ರೆಗೆ ಸುರಕ್ಷಿತವಾಗಿ ರವಾನಿಸಲಾಯಿತು. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.



