ವೃತ್ತಿಯಲ್ಲಿ ಶಿಕ್ಷಕಿ..ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ : ಆದರೆ ಡ್ರಗ್ಸ್ ದಂಧೆಯ ಲೆಡಿ ಡಾನ್ ಗಳು..!!

Prakhara News
1 Min Read

ಕೋಝಿಕೋಡ್ : ಕೇರಳದ ಕೋಝಿಕೋಡ್ ಜಿಲ್ಲೆಯ ವಡಕರದಲ್ಲಿ ಎಂಡಿಎಂಎ (MDMA) ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಗುತ್ತಿಗೆ ಆಧಾರಿತ ಶಿಕ್ಷಕಿಯರಾದ ಕೀರ್ತನಾ ಹಾಗೂ ಕಾವ್ಯಾ ಇಬ್ಬರನ್ನೂ ಶಿಕ್ಷಣ ಇಲಾಖೆ ಸೇವೆಯಿಂದ ಅಧಿಕೃತವಾಗಿ ವಜಾಗೊಳಿಸಿದೆ.

ಆರೋಪಿ ಕೀರ್ತನಾ ಶಾಲೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಜುಂಬಾ ನೃತ್ಯ ತರಗತಿಗಳನ್ನು ಸಹ ನಡೆಸುತ್ತಿದ್ದಳು. ಆದರೆ ರಹಸ್ಯವಾಗಿ ಮಾದಕ ದ್ರವ್ಯ ಗ್ಯಾಂಗ್‌ಗಳಲ್ಲಿ ‘ಲೇಡಿ ಡಾನ್’ ಎಂದೇ ಗುರುತಿಸಿಕೊಂಡಿದ್ದ ಈಕೆ, ಸಹೋದ್ಯೋಗಿ ಕಾವ್ಯಾ ಜೊತೆಗೂಡಿ ನೆಟ್‌ವರ್ಕ್ ವಿಸ್ತರಿಸಿದ್ದಳು. ಪೊಲೀಸ್ ಕಾರ್ಯಾಚರಣೆ ‘ಆಪರೇಷನ್ ತೂಫಾನ್’ ವೇಳೆ 2 ಗ್ರಾಂ MDMA ಯೊಂದಿಗೆ ಸಿಕ್ಕಿಬಿದ್ದ ಸಫ್ವಾನ್ ಎಂಬಾತ ನೀಡಿದ ಸುಳಿವಿನ ಆಧಾರದಲ್ಲಿ ಈ ಇಬ್ಬರು ಶಿಕ್ಷಕಿಯರ ಮುಖವಾಡ ಕಳಚಿಬಿದ್ದಿತ್ತು.

ಆರೋಪಿಗಳು ಯುವಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಪೂರೈಸುತ್ತಿದ್ದರು. ಗ್ರಾಹಕರಿಂದ ಕ್ಯೂಆರ್ (QR) ಕೋಡ್ ಮೂಲಕ ಆನ್‌ಲೈನ್‌ನಲ್ಲೇ ಹಣ ಪಡೆದು, ಗೂಗಲ್ ಮ್ಯಾಪ್ ಲೋಕೇಶನ್ ಕಳುಹಿಸಿ ಎಂಡಿಎಂಎ ಡೆಲಿವರಿ ಮಾಡುತ್ತಿದ್ದರು. ಇವರ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ಹರಿದುಬಂದಿದ್ದು, ಡ್ರಗ್ಸ್ ಹಣದಿಂದ ಐಷಾರಾಮಿ ಕಾರು ಖರೀದಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಇಬ್ಬರನ್ನೂ ಕಸ್ಟಡಿಗೆ ಪಡೆದಿರುವ ಪೊಲೀಸರು, ಮುಖ್ಯ ಸರಬರಾಜುದಾರ ಹಾಗೂ ಮಾದಕ ದ್ರವ್ಯ ಜಾಲದ ಹಿಂದಿರುವ ‘ದೊಡ್ಡ ಕೈ’ಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

Share This Article
Leave a Comment