ಕಾಸರಗೋಡು: ತಮ್ಮ ಸ್ವಂತ ಕ್ಲಿನಿಕ್ಗೆ ಚಿಕಿತ್ಸೆಗೆ ಬಂದಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಗಂಭೀರ ಪ್ರಕರಣದಲ್ಲಿ, ಕಾಸರಗೋಡು ಜಿಲ್ಲಾ ಆಸ್ಪತ್ರೆಯ ನಿವೃತ್ತ ವೈದ್ಯಕೀಯ ಅಧೀಕ್ಷಕ (Superintendent) ಹಾಗೂ ಹಿರಿಯ ಮಕ್ಕಳ ವೈದ್ಯರಿಗೆ ಹೊಸದುರ್ಗ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಬರೋಬ್ಬರಿ 47 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.


ಶಿಕ್ಷೆಗೆ ಗುರಿಯಾದ ವೈದ್ಯನನ್ನು ಡಾ. ಪಿ. ಕೃಷ್ಣನ್ (78) ಎಂದು ಗುರುತಿಸಲಾಗಿದೆ. ಹೊಸದುರ್ಗ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಪಿ.ಎಂ. ಅವರು ಅಕ್ಟೋಬರ್ 31 ರಂದು ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದಾರೆ.

ಈ ಭೀಕರ ಅಪರಾಧವು ಜೂನ್ 25, 2020 ರಂದು ಕೋವಿಡ್-19 ಸಾಂಕ್ರಾಮಿಕ ನಿರ್ಬಂಧಗಳು ಜಾರಿಯಲ್ಲಿದ್ದಾಗ ನಡೆದಿತ್ತು. ಆಗ 72 ವರ್ಷ ವಯಸ್ಸಿನವರಾಗಿದ್ದ ಡಾ. ಕೃಷ್ಣನ್, ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹುದ್ದೆಯಿಂದ ನಿವೃತ್ತರಾದ ಬಳಿಕ ಪೆರಿಯಾದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ಕಾಲಿನ ಹುಣ್ಣಿನ ಸೋಂಕಿಗೆ ಚಿಕಿತ್ಸೆ ಪಡೆಯಲು 15 ವರ್ಷದ ಬಾಲಕಿ ತನ್ನ ತಂದೆಯೊಂದಿಗೆ ಕ್ಲಿನಿಕ್ಗೆ ಆಗಮಿಸಿದ್ದಳು. ಈ ವೇಳೆ ವೈದ್ಯರು ಬಾಲಕಿಯನ್ನು ತಪಾಸಣಾ ಕೊಠಡಿಗೆ (Examining Room) ಒಂಟಿಯಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು. ಮರುದಿನ ಬಾಲಕಿ ಪೋಷಕರಿಗೆ ತನಗಾದ ಅನ್ಯಾಯವನ್ನು ತಿಳಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿತ್ತು.

IPC ಸೆಕ್ಷನ್ 376 (3) (16 ವರ್ಷದೊಳಗಿನ ಬಾಲಕಿ ಮೇಲಿನ ಅತ್ಯಾಚಾರ): 20 ವರ್ಷ ಕಠಿಣ ಜೈಲು ಶಿಕ್ಷೆ.
POCSO Act ಸೆಕ್ಷನ್ 6 (1) r/w 5(e) (ವೈದ್ಯಕೀಯ ಆಡಳಿತ ಸಿಬ್ಬಂದಿಯಿಂದ ತೀವ್ರ ಲೈಂಗಿಕ ದೌರ್ಜನ್ಯ): 20 ವರ್ಷ ಕಠಿಣ ಜೈಲು ಶಿಕ್ಷೆ.
POCSO Act ಸೆಕ್ಷನ್ 10 r/w 9(e): 7 ವರ್ಷ ಜೈಲು ಶಿಕ್ಷೆ.

ಈ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (Concurrently) ಜಾರಿಯಾಗುವುದರಿಂದ ಆರೋಪಿ ವೈದ್ಯ ಡಾ. ಕೃಷ್ಣನ್ ಅವರು ಕನಿಷ್ಠ 20 ವರ್ಷಗಳ ಕಾಲ ಸತತ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇದರೊಂದಿಗೆ ನ್ಯಾಯಾಲಯವು ₹1.25 ಲಕ್ಷ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 18 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪ್ರಕರಣದ ಆರಂಭಿಕ ತನಿಖೆಯನ್ನು ಬೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಪಿ. ನಾರಾಯಣನ್ ನಡೆಸಿದ್ದರು. ತನಿಖೆಯ ಸಮಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಕೃಷ್ಣನ್ ಬಂಧನದಿಂದ ಪಾರಾಗಿದ್ದರು. ನಂತರ ಬಂದ ಇನ್ಸ್ಪೆಕ್ಟರ್ ನಿಜಾಮ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (Charge Sheet) ಸಲ್ಲಿಸಿದ್ದರು.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪೊಲೀಸರು ಆರೋಪಿ ಡಾ. ಕೃಷ್ಣನ್ ಅವರನ್ನು ತಕ್ಷಣವೇ ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ರವಾನಿಸಿದ್ದಾರೆ.


