ಮನೆ ಮೇಲೆ ಕುಸಿದ ಗೆಸ್ಟ್ ಹೌಸ್ ದೈತ್ಯ ತಡೆಗೋಡೆ; ವಾರದ ಮುನ್ನವೇ ಸ್ಥಳಾಂತರಗೊಂಡು ಪ್ರಾಣಾಪಾಯದಿಂದ ಪಾರಾದ ಕುಟುಂಬ..!

Prakhara News
2 Min Read

ಮಂಗಳೂರು : ಕಳೆದೆರಡು ದಿನಗಳಿಂದ ಕರಾವಳಿಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ತಾಲೂಕಿನ ಕೆರೆಬೈಲ್ ಗುಡ್ಡೆ ಪ್ರದೇಶದಲ್ಲಿ ಬುಧವಾರ (ಜುಲೈ 01) ಭೀಕರ ಅವಘಡವೊಂದು ಸಂಭವಿಸಿದೆ. ಗುಡ್ಡದ ತುತ್ತ ತುದಿಯಲ್ಲಿದ್ದ ಖಾಸಗಿ ಗೆಸ್ಟ್ ಹೌಸ್‌ನ ಬೃಹತ್ ಆವರಣ ಗೋಡೆ (ಕಾಂಪೌಂಡ್ ವಾಲ್) ತಳಭಾಗದಲ್ಲಿದ್ದ ವಾಸದ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಆದರೆ, ಮನೆಯಲ್ಲಿದ್ದ ಕುಟುಂಬಸ್ಥರು ವಾರದ ಹಿಂದಷ್ಟೇ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದರಿಂದ ದೊಡ್ಡದೊಂದು ದುರಂತ ತಪ್ಪಿದೆ.

ಇಲ್ಲಿನ ನಿವಾಸಿ ಕಿಶೋರ್ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ಹಾನಿಗೀಡಾದ ಕಟ್ಟಡವಾಗಿದೆ. ಕೆರೆಬೈಲು ಗುಡ್ಡೆ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಗುಡ್ಡದ ತುದಿಯಲ್ಲಿ ಮಂಗಳೂರು ಮೂಲದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಸೇರಿದ ಗೆಸ್ಟ್ ಹೌಸ್ ಇದೆ. ಇದರ ಅವೈಜ್ಞಾನಿಕ ಆವರಣ ಗೋಡೆಯೇ ಇಂದಿನ ದುರಂತಕ್ಕೆ ಕಾರಣ ಎನ್ನಲಾಗಿದೆ.

ಕಿಶೋರ್ ಅವರ ಮನೆಯ ಮೇಲ್ಭಾಗದಲ್ಲಿದ್ದ ಗೆಸ್ಟ್ ಹೌಸ್‌ನ ಆವರಣ ಗೋಡೆಯಲ್ಲಿ ಕಳೆದ ವಾರವಷ್ಟೇ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಅಪಾಯವನ್ನು ಮುಂಚಿತವಾಗಿಯೇ ಅರಿತ ಕಿಶೋರ್ ಹಾಗೂ ಅವರ ಕುಟುಂಬದ ಸದಸ್ಯರು ವಾರದ ಹಿಂದಷ್ಟೇ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು. ಕಳೆದ ವರ್ಷದ ಮಳೆಗಾಲದಲ್ಲೂ ಇದೇ ರೀತಿ ಗೋಡೆ ಬಿರುಕು ಬಿಟ್ಟಾಗ ಇವರು ಬಾಡಿಗೆ ಮನೆಗೆ ತೆರಳಿದ್ದರು. ಈ ಬಾರಿಯೂ ಸಮಯಪ್ರಜ್ಞೆ ಮೆರೆದು ವಾರದ ಹಿಂದೆಯೇ ಮನೆ ಖಾಲಿ ಮಾಡಿದ್ದರಿಂದ ಇಡೀ ಕುಟುಂಬದ ಜೀವ ಉಳಿದಂತಾಗಿದೆ.

“ನಾವು ಕಳೆದ 40 ವರ್ಷಗಳಿಂದ ಈ ಗುಡ್ಡೆ ಪ್ರದೇಶದಲ್ಲಿ ಯಾವುದೇ ಆತಂಕವಿಲ್ಲದೆ ಬದುಕುತ್ತಿದ್ದೆವು. ಆದರೆ, ಮಂಗಳೂರಿನ ಸಂಸ್ಥೆಯು ಗೆಸ್ಟ್ ಹೌಸ್ ಕಟ್ಟಿ, ಅದರ ಸುತ್ತಲೂ ಎತ್ತರದ ಆವರಣ ಗೋಡೆ ನಿರ್ಮಿಸಿದ ಬಳಿಕ ಕಳೆದ ನಾಲ್ಕೈದು ವರ್ಷಗಳಿಂದ ಈ ಮಣ್ಣು ಕುಸಿತದ ಸಮಸ್ಯೆ ಉದ್ಭವಿಸಿದೆ” ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯದ ಮಳೆಗೆ ಗೆಸ್ಟ್ ಹೌಸ್‌ನ ಇನ್ನುಳಿದ ಆವರಣ ಗೋಡೆಯೂ ಕುಸಿಯುವ ಭೀತಿಯಲ್ಲಿದ್ದು, ಸುತ್ತಮುತ್ತಲಿನ 40 ಮನೆಗಳಿಗೆ ಕಂಟಕ ಎದುರಾಗಿದೆ. ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಆವರಣ ಗೋಡೆಯನ್ನು ವೈಜ್ಞಾನಿಕವಾಗಿ ಮರುನಿರ್ಮಾಣ ಮಾಡಬೇಕಾಗಿದೆ.

Share This Article
Leave a Comment