ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದು, ಅನಧಿಕೃತ ಒಟಿಪಿ (OTP) ಹಾಗೂ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.


ಯೋಜನೆಯ ಮರುಪರಿಶೀಲನಾ ಪ್ರಕ್ರಿಯೆಯನ್ನು ಸರ್ಕಾರದ ಅಧಿಕೃತ ಆದೇಶ ಹಾಗೂ ನಿಗದಿತ ಕಾರ್ಯವಿಧಾನಗಳನ್ವಯವೇ ಕೈಗೊಳ್ಳಲಾಗುತ್ತಿದ್ದು, ಈವರೆಗೆ ಇಲಾಖೆಯಿಂದ ಯಾವುದೇ ರೀತಿಯ ಮರುಪರಿಶೀಲನಾ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಅಧಿಕೃತವಾಗಿ ಮರುಪರಿಶೀಲನೆ ನಡೆಯುವ ಸಂದರ್ಭದಲ್ಲಿ, ಮರುಪರಿಶೀಲನಾ ಅರ್ಜಿಯಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ (Aadhaar Linked) ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ.

ಫಲಾನುಭವಿಯ ನೈಜತೆಯನ್ನು ಗುರುತಿಸಿ, ಒಟಿಪಿ (OTP) ಮೂಲಕ ಅಧಿಕೃತವಾಗಿ ದೃಢೀಕರಿಸುವ ಸಲುವಾಗಿ ಮಾತ್ರವೇ ಈ ಆಧಾರ್ ಜೋಡಣೆಯಾದ ಮೊಬೈಲ್ ಸಂಖ್ಯೆಯ ಅಗತ್ಯವಿರುತ್ತದೆ ಎಂದು ಇಲಾಖೆ ತಿಳಿಸಿದೆ. ಕೆಲವೆಡೆ ‘ಗೃಹಲಕ್ಷ್ಮಿ ಸಮೀಕ್ಷೆ’ ಅಥವಾ ‘ಅರ್ಜಿ ನವೀಕರಣ’ ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಹಾಗೂ ಖಾಸಗಿ ಏಜೆನ್ಸಿಗಳು ಸಾರ್ವಜನಿಕರಿಂದ ಒಟಿಪಿ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕೇಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.


ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಂತಹ ಅನಧಿಕೃತ ಕರೆಗಳು, ಸಂದೇಶಗಳು ಅಥವಾ ವ್ಯಕ್ತಿಗಳಿಗೆ ತಮ್ಮ ಖಾಸಗಿ ಬ್ಯಾಂಕ್ ವಿವರಗಳನ್ನು ಹಾಗೂ ಮೊಬೈಲ್ಗೆ ಬರುವ OTP ಯನ್ನು ಹಂಚಿಕೊಳ್ಳಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


