ಮಂಗಳೂರು : ಮಂಗಳೂರು ನಗರದಲ್ಲಿ ಮೇ 1ರಿಂದ ನೀರು ಸರಬರಾಜು ರೇಷನಿಂಗ್ ಜಾರಿ : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

Prakhara News
1 Min Read

ಮಂಗಳೂರು : ಮಂಗಳೂರು ನಗರದಲ್ಲಿ ಮೇ 1ರಿಂದ ನೀರು ಸರಬರಾಜು ರೇಷನಿಂಗ್ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ (MCC) ಆಡಳಿತಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಭೆ ವೆಂಟೆಡ್ ಡ್ಯಾಂ ಮತ್ತು ಎಎಂಆರ್ ಡ್ಯಾಂಗಳಲ್ಲಿ ಜೂನ್ 10ರವರೆಗೆ ನಗರಕ್ಕೆ ಬೇಕಾದಷ್ಟು ನೀರು ಲಭ್ಯವಿದೆ. ಆದಾಗ್ಯೂ, ಬೇಸಿಗೆ ಸಮಯದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಹಾಗೂ ಸುರತ್ಕಲ್ ಸೇರಿದಂತೆ ಎಲ್ಲಾ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಮೇ 1ರಿಂದ ನಿಯಂತ್ರಿತ ನೀರು ಸರಬರಾಜು ಜಾರಿಗೊಳಿಸಲಾಗುತ್ತದೆ ಎಂದರು.

ಪ್ರಸ್ತುತ ತುಂಭೆಯಿಂದ ದಿನಕ್ಕೆ 160 MLD ನೀರು ಪಂಪ್ ಮಾಡಲಾಗುತ್ತಿದ್ದು, ಈ ವ್ಯವಸ್ಥೆ ಮುಂದುವರಿಯಲಿದೆ. ಆದರೆ ಪ್ರತಿಯೊಂದು ವಾರ್ಡ್‌ಗೆ ಕನಿಷ್ಠ ಎರಡು ದಿನಕ್ಕೊಮ್ಮೆ ನೀರು ದೊರೆಯುವಂತೆ ಕೆಲವು ಗಂಟೆಗಳ ಕಾಲ ಸರಬರಾಜು ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 24ರ ವೇಳೆಗೆ ತುಂಭೆ ಡ್ಯಾಂನಲ್ಲಿ 4.53 ಮೀ. ಹಾಗೂ ಎಎಂಆರ್ ಡ್ಯಾಂನಲ್ಲಿ 18.53 ಮೀ. ನೀರು ಸಂಗ್ರಹವಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಡ್ಯಾಂಗಳಿಗೆ ನೀರಿನ ಒಳಹರಿವು ಹೆಚ್ಚುತ್ತಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ನಗರ ನೀರು ಸರಬರಾಜಿಗೆ ಅಕ್ರಮ ಸಂಪರ್ಕಗಳ ಬಗ್ಗೆ ಮಾತನಾಡಿದ ಅವರು, 40ಕ್ಕೂ ಹೆಚ್ಚು ಅಕ್ರಮ ಸಂಪರ್ಕಗಳನ್ನು ಗುರುತಿಸಲಾಗಿದ್ದು, ಇನ್ನೂ ಹಲವಾರು ಸಂಪರ್ಕಗಳ ಪರಿಶೀಲನೆ ನಡೆಯುತ್ತಿದೆ. ಮಾನವೀಯ ಕಾರಣಗಳಿಂದ ಅವುಗಳನ್ನು ತಕ್ಷಣ ಕಡಿತಗೊಳಿಸಿಲ್ಲ. ಮೀಟರ್ ಅಳವಡಿಸಿ ನಿಯಂತ್ರಿತ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Share This Article
Leave a Comment