ನವದೆಹಲಿ : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬೆಂಗಾವಲಾಗಿ ನಿಂತು ತಮ್ಮ ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆಯಿಂದ ಇಡೀ ದೇಶದ ಗಮನ ಸೆಳೆದಿದ್ದ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಅವರು ಭಾರತೀಯ ಸೇನೆಯಿಂದ ಅವಧಿಗೂ ಮುನ್ನ ನಿವೃತ್ತಿ ಪಡೆದುಕೊಂಡಿದ್ದಾರೆ. ಸುಮಾರು 12 ವರ್ಷಗಳ ಕಾಲ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ಅವರು ಈ ನಿರ್ಧಾರ ತಳೆದಿದ್ದಾರೆ.


ಮೇಜರ್ ರಿಷಬ್ ಅವರು ಭಾರತೀಯ ಸೇನೆಯ ಅತ್ಯಂತ ಶ್ರೇಷ್ಠ ಪಡೆ ಎನಿಸಿದ ‘4 ಪ್ಯಾರಾ’ (ಸ್ಪೆಷಲ್ ಫೋರ್ಸಸ್) ಕಮಾಂಡೋ ಪಡೆಯ ಅಧಿಕಾರಿಯಾಗಿದ್ದರು. ಇತ್ತೀಚಿನವರೆಗೂ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಮುರ್ಮು ಅವರ ಅಧಿಕೃತ ‘ಎಡಿಸಿ’ (Aide-de-Camp – ಸೇನಾ ಸಹಾಯಕ) ಆಗಿ ಕರ್ತವ್ಯ ನಿರ್ವಹಿಸಿದ್ದರು.
ಜಮ್ಮುವಿನ ಡೋಗ್ರಾ ರಜಪೂತ ಜನಾಂಗಕ್ಕೆ ಸೇರಿದ ರಿಷಬ್ ಸಿಂಗ್ ಸಂಬ್ಯಾಲ್ ಅವರು 2021ರಲ್ಲಿ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಆಗಿ ಗಣರಾಜ್ಯೋತ್ಸವದ ಪೆರೇಡ್ನ ತುಕಡಿಯ ನೇತೃತ್ವ ವಹಿಸಿದ್ದರು. ರಾಷ್ಟ್ರಪತಿ ಮುರ್ಮು ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾಗ ಅವರ ಗಂಭೀರ ಮುಖಭಾವ, ತಾಳ್ಮೆ, ಸಭ್ಯತೆ ಹಾಗೂ ಕಾಳಜಿ ವಹಿಸುವ ರೀತಿ ನೆಟ್ಟಿಗರ ಮನಗೆದ್ದಿತ್ತು. ಅನೇಕರು ಅವರನ್ನು ‘ನ್ಯಾಷನಲ್ ಕ್ರಶ್’ ಎಂದೇ ಕರೆಯುತ್ತಿದ್ದರು.


ರಾಷ್ಟ್ರಪತಿಯವರು ಶಬರಿಮಲೆಗೆ ಭೇಟಿ ನೀಡಿದ್ದಾಗ ಇರುಮುಡಿ ಹೊತ್ತು ಮೆಟ್ಟಿಲು ಹತ್ತಲು ನೆರವಾದ ರೀತಿ ಸೇರಿದಂತೆ, ಅವರನ್ನು ತಾಯಿಯಂತೆ ಗೌರವದಿಂದ ನೋಡಿಕೊಳ್ಳುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ರಿಷಬ್, ಸೇನೆಗೆ ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದ್ದಾರೆ. “ಕೆಲವು ಖಾಸಗಿ ಕಾರಣಗಳು ಹಾಗೂ ಕುಟುಂಬಕ್ಕಾಗಿ ಸೇನೆಯನ್ನು ತೊರೆದಿದ್ದೇನೆ. ಆದರೆ ಸೇನೆಯಲ್ಲಿ ಸಾಧಿಸಿದ್ದಕ್ಕಾಗಿ ನನಗೆ ಹೆಮ್ಮೆಯಿದೆ. ಕೆಲವೊಂದು ಘಟನೆಗಳು ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತವೆ,” ಎಂದಿದ್ದಾರೆ. ಸೇನೆ ಬಿಟ್ಟು ವಿದೇಶದಲ್ಲಿ ನೆಲೆಸುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಅವರು, “ನಾನು ಭಾರತದಲ್ಲೇ ಇದ್ದು ದೇಶ ಸೇವೆ ಮಾಡುತ್ತೇನೆ. ಮುಂದಿನ ಯೋಜನೆಗಳ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇನೆ,” ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ವಿವಾಹದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, “ನನಗೆ ಇನ್ನೂ ಮದುವೆಯಾಗಿಲ್ಲ, ಯಾವುದೇ ಗೆಳತಿಯೂ ಇಲ್ಲ. ಮದುವೆಯಾದರೆ ಖಂಡಿತ ನಿಮಗಷ್ಟೇ ತಿಳಿಸುತ್ತೇನೆ,” ಎಂದು ಎದುರಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರೊಫೈಲ್ ಹೆಸರನ್ನು ‘ರಾಷ್ಟ್ರಪತಿಗಳ ಮಾಜಿ ಎಡಿಸಿ’ ಎಂದು ಬದಲಾಯಿಸಿಕೊಂಡಿರುವ ರಿಷಬ್, ಸ್ವಂತ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

