ಮಂಗಳೂರು: ನಗರದ ಎಕ್ಕೂರು ಅಯ್ಯಪ್ಪ ಭಜನಾ ಮಂದಿರ ಹಿಂದುಗಡೆ ಇರುವ ಕೆಲವು ಮನೆಗಳಿಗೆ ಡ್ರೈನೇಜ್ ನಿಂದಾಗಿ ತೀವ್ರ ತೊಂದರೆಯಾಗಿದ್ದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ಸಭೆ ನಡೆಯಿತು.


ಸ್ಥಳೀಯರ ಪರವಾಗಿ ಹಾಜರಿದ್ದ ಎಕ್ಕೂರು ನಿವಾಸಿ ತನುಜಾರವರು ಅಲ್ಲಿನ ಹತ್ತಾರು ಮನೆಗಳು ಡ್ರೈನೇಜ್ ನಿಂದಾಗಿ ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿದರು. ಕೂಡಲೇ ಸ್ಪಂದಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಅಗತ್ಯ ಕ್ರಮಗಳ ವರದಿ ತಯಾರಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಉಪ ಆಯುಕ್ತರಾದ (ಅಭಿವೃದ್ಧಿ) ನರೇಶ್ ಶೆಣೈ, AEE ಶಿವಲಿಂಗಪ್ಪ, AE ಪ್ರಿಯಾಂಕ, ಕುಡ್ಸೆಂಪ್ ಅಧಿಕಾರಿಗಳಾದ ಜಯಪ್ರಕಾಶ್, ಸುರೇಶ್, ಶಿವರಾಮ್, ಸಂಪತ್, ವೆಂಕಟರಮಣ ಮೊದಲಾದವರು ಉಪಸ್ಥಿತರಿದ್ದರು.



