ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Prakhara News
1 Min Read

ಕೊಕ್ಕಡ: ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಕೊಕ್ಕಡ ಗ್ರಾಮದ ಹಳ್ಳಿಂಗೇರಿಯಲ್ಲಿ ನಡೆದಿದೆ.

ಪ್ರಸ್ತುತ ಕೊಕ್ಕಡ ಹಳ್ಳಿಂಗೇರಿಯ ನಿವಾಸಿಯಾಗಿರುವ ಮೂಲತಃ ಧಾರವಾಡ ಜಿಲ್ಲೆಯ ಹಿರೇಗುಂಜಲ್-ಚಿಕ್ಕಗುಂಜಲ್ ಮೂಲದ ರಮೇಶ್ ಅವರ ಪುತ್ರಿ ಶ್ವೇತಾ(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಸುಮಾರು ಐದು ವರ್ಷಗಳಿಂದ ಶ್ವೇತಾ ಅವರ ತಂದೆ-ತಾಯಿ ಕೊಕ್ಕಡ ಸಮೀಪದ ಹಳ್ಳಿಂಗೇರಿಯಲ್ಲಿ ನೆಲೆಸಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಮಾಹಿತಿಯ ಪ್ರಕಾರ, ಶ್ವೇತಾ ಎಂದಿನಂತೆ ಬೆಳಗ್ಗೆ ಎದ್ದು ಕಾಲೇಜಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಘಟನೆಯ ವೇಳೆ ತಂದೆ ಕೆಲಸದ ನಿಮಿತ್ತ ಹೊರಗೆ ತೆರಳಿದ್ದು, ತಾಯಿ ಮಾತ್ರ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಈ ಮಧ್ಯೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ವೇತಾಳ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment