ಮಂಗಳೂರು: ‘mParivahan’ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ ಕಂಗಾಲಾದ ವ್ಯಕ್ತಿ; ಖಾತೆಯಿಂದ ₹4.89 ಲಕ್ಷ ಎಗರಿಸಿದ ಸೈಬರ್ ಖದೀಮರು..!

Prakhara News
1 Min Read

ಮಂಗಳೂರು: ಸರ್ಕಾರಿ ಆಪ್ ಮಾದರಿಯ ನಕಲಿ ‘mParivahan’ (ಎಮ್‌ಪರಿವಾಹನ್) ಎಪಿಕೆ (APK) ಫೈಲ್ ಡೌನ್‌ಲೋಡ್ ಮಾಡಿದ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ ₹4,89,509 ಹಣವನ್ನು ಸೈಬರ್ ವಂಚಕರಿಂದಾಗಿ ಕಳೆದುಕೊಂಡಿರುವ ಗಂಭೀರ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ವಂಚನೆಗೆ ಒಳಗಾದ ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ (CEN Police Station) ಪ್ರಕರಣ ದಾಖಲಾಗಿದೆ.

ಅಕ್ಟೋಬರ್ 28 ರಂದು ದೂರುದಾರರಾದ 50 ವರ್ಷದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಒಟ್ಟು ₹4,89,509 ರೂಪಾಯಿಗಳು ಹಂತ ಹಂತವಾಗಿ ಅಪರಿಚಿತವಾಗಿ ಕಡಿತಗೊಂಡಿದ್ದವು. ತಮ್ಮ ಖಾತೆಯಿಂದ ಭಾರಿ ಪ್ರಮಾಣದ ಹಣ ಡ್ರಾ ಆಗಿರುವ ಸಂದೇಶ (SMS) ನೋಡಿ ಆಘಾತಕ್ಕೊಳಗಾದ ಅವರು, ತಕ್ಷಣವೇ ಈ ವಿಷಯವನ್ನು ತಮ್ಮ ಕುಟುಂಬದ ಸದಸ್ಯರ ಗಮನಕ್ಕೆ ತಂದಿದ್ದಾರೆ.

ಮನೆಯವರು ದೂರುದಾರರ ಮೊಬೈಲ್ ಫೋನ್ ಅನ್ನು ಕೂಲಂಕುಷವಾಗಿ ತಪಾಸಣೆ ನಡೆಸಿದಾಗ, ಮೊಬೈಲ್‌ನಲ್ಲಿ ವಾಹನ ಸಾರಿಗೆ ಇಲಾಖೆಯ ಹೆಸರನ್ನು ಹೋಲುವ ‘mParivahan’ ಎಂಬ ಅಪಾಯಕಾರಿ ನಕಲಿ APK (Android Package Kit) ಫೈಲ್ ಡೌನ್‌ಲೋಡ್ ಆಗಿರುವುದು ಪತ್ತೆಯಾಗಿದೆ.

ಸೈಬರ್ ವಂಚಕರು ಸಂಚಾರ ನಿಯಮ ಉಲ್ಲಂಘನೆ ಅಥವಾ ಇ-ಚಲನ್ ನೆಪದಲ್ಲಿ ಕಳುಹಿಸಿದ್ದ ಲಿಂಕ್ ಮೂಲಕ ಈ ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿರುವುದು ತನಿಖೆಯಲ್ಲಿ ಶಂಕಿಸಲಾಗಿದೆ. ತಮ್ಮ ಮೊಬೈಲ್‌ಗೆ ಹ್ಯಾಕಿಂಗ್ ಅಪ್ಲಿಕೇಶನ್ ಸೇರಿಕೊಂಡು ಹಣ ದೋಚಿರುವುದು ಖಚಿತವಾಗುತ್ತಿದ್ದಂತೆಯೇ, ಸಂತ್ರಸ್ತರು ವಿಳಂಬ ಮಾಡದೆ ತಕ್ಷಣವೇ ಸೈಬರ್ ಕ್ರೈಮ್‌ಗಳ ರಾಷ್ಟ್ರೀಯ ತುರ್ತು ಸಹಾಯವಾಣಿ 1930 ಗೆ ಕರೆ ಮಾಡಿ ಆನ್‌ಲೈನ್ ಮೂಲಕ ಅಧಿಕೃತ ದೂರು ದಾಖಲಿಸಿದ್ದಾರೆ.

Share This Article
Leave a Comment