ಸುಳ್ಯ: ಸುಳ್ಯದ ಸೂರ್ತಿಲದಲ್ಲಿ ವಿವಾಹಿತ ಮಹಿಳೆಯೋರ್ವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಪೀಡಿಸಿದ ಆರೋಪದಲ್ಲಿ ಆಟೋ ಚಾಲಕ ಗೋಪಾಲಕೃಷ್ಣ ಜಯನಗರ ಎಂಬವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿಯನ್ನು ತನಿಖೆ ಮತ್ತು ಸ್ಥಳ ಮಹಜರು ನಡೆಸಿದ ಬಳಿಕ ಸುಳ್ಯ ಪೊಲೀಸರು ಆರೋಪಿ ಗೋಪಾಲಕೃಷ್ಣರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು ಸುಳ್ಯ ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ‘ನಾನು ಹಾವೇರಿ ಜಿಲ್ಲೆಯವಳಾಗಿದ್ದು, ಸುಳ್ಯದ ಸೂರ್ತಿಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ನಾನು ಬಾಣಂತಿಯರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಗೋಪಾಲಕೃಷ್ಣರ ಪರಿಚಯವಾಗಿದೆ. ಬಳಿಕ ಆತ ನನ್ನೊಂದಿಗೆ ಸಲುಗೆಯಾಗಿ ವರ್ತಿಸುತ್ತಿದ್ದ. 2025ನೇ ಜೂನ್ ತಿಂಗಳಲ್ಲಿ ಆತನ ಮನೆಗೆ ಬರುವಂತೆ ಒತ್ತಾಯಿಸಿ ಬಳಿಕ ನನ್ನನ್ನು ಆತನ ಮನೆಗೆ ಕರೆದೊಯ್ದು ಮದ್ಯವನ್ನು ಸೇವನೆ ಮಾಡಿಸಿ ಬಲಾತ್ಕಾರವಾಗಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆ ಘಟನೆಯನ್ನು ಆತ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಬಳಿಕ ಆಗಾಗ ನನಗೆ ಫೋನ್ ಮಾಡಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯನ್ನು ಹಾಕಿ ಪದೇ ಪದೇ ನನ್ನನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

ಆಗಸ್ಟ್ 2. 2026 ರಂದು ಆತ ಸೂರ್ತಿಲದಲ್ಲಿ ನನ್ನ ಬಾಡಿಗೆ ಮನೆಯ ಬಳಿ ಬಂದು ಮತ್ತೆ ಮನೆಗೆ ಬರುವಂತೆ ಒತ್ತಾಯಿಸಿದ್ದು ಬಾರದೆ ಹೋದರೆ ವಿಡಿಯೋವನ್ನು ವಾಟ್ಸಪ್ ಮೂಲಕ ಕಳುಹಿಸುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಅಲ್ಲದೆ ನಿನ್ನನ್ನು ಮತ್ತು ನಿನ್ನ ಗಂಡನನ್ನು ಕಡಿದು ಕೊಲೆ ಮಾಡುವುದಾಗಿ ಬೆದರಿಸಿ ಬಳಿಕ ಮಾರಕ ವಸ್ತುವನ್ನು ತಂದು ಮನೆಯ ಬಳಿ ಗಲಾಟೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರನ್ನು ದಾಖಲಿಸಿಕೊಂಡ ಸುಳ್ಯ ಪೊಲೀಸರು ಆರೋಪಿಯನ್ನು ತನಿಖೆ ನಡೆಸಿ ಜಯನಗರದ ಅವರ ಮನೆ ಮತ್ತು ಪರಿಸರದಲ್ಲಿ ಮಹಜರು ಕಾರ್ಯ ನಡೆಸಿ ಆ 3 ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.


