ಬೆಂಗಳೂರು: ತಮ್ಮ ವಿಭಿನ್ನ ಬೀಟ್ ಶೈಲಿ ಹಾಗೂ ಅದ್ಭುತ ವಾದನದ ಮೂಲಕ ದಕ್ಷಿಣ ಭಾರತದ ಸಂಗೀತಾಸಕ್ತರ ಮನಗೆದ್ದಿದ್ದ ಜನಪ್ರಿಯ ‘ಕನ್ನಡ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ‘ಸ್ಕಂದಶ್ರೀ ಅಪಾರ್ಟ್ಮೆಂಟ್’ ನಿವಾಸದಲ್ಲಿ ಕೊನೆಯುಸಿರೆಳೆದ ದೇವ್, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


ಕನ್ನಡ ಚಿತ್ರರಂಗ ಸೇರಿದಂತೆ ಹಲವು ಬೃಹತ್ ಸಂಗೀತ ಸಂಜೆ ಹಾಗೂ ವೇದಿಕೆಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ದೇವ್, ಡ್ರಮ್ಸ್ ಬಾರಿಸುವ ಕ್ರೇಜ್ನಿಂದಾಗಿಯೇ ‘ಕನ್ನಡ ಶಿವಮಣಿ’ ಎಂದೇ ಬಿರುದು ಪಡೆದಿದ್ದರು. ವಿಶೇಷವಾಗಿ ಐಪಿಎಲ್ ಕ್ರಿಕೆಟ್ ಸರಣಿ ವೇಳೆ ಬೆಂಗಳುರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಆರ್ಸಿಬಿ’ ಪಂದ್ಯಗಳ ಸಂದರ್ಭದಲ್ಲಿ ಇವರು ನೀಡುತ್ತಿದ್ದ ಲೈವ್ ಬೀಟ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸುತ್ತಿತ್ತು.
ಕಳೆದ ಜೂನ್ ತಿಂಗಳಲ್ಲಿ ದೇವ್ ಅವರಿಗೆ ಪಾರ್ಶ್ವವಾಯು (Stroke) ಕಾಣಿಸಿಕೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬಂದಿತ್ತು. ಈ ನಡುವೆ ತೀವ್ರ ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಸಿ ಬಲಗಾಲನ್ನು ತೆರವುಗೊಳಿಸಲಾಗಿತ್ತು. ಬಳಿಕ ಪಾರ್ಶ್ವವಾಯುವಿನ ತೀವ್ರತೆಯಿಂದ ಚೇತರಿಸಿಕೊಳ್ಳಲಾಗದೆ ತಮ್ಮ ಅಪಾರ್ಟ್ಮೆಂಟ್ ನಿವಾಸದಲ್ಲೇ ವೈದ್ಯರ ಮಾರ್ಗದರ್ಶನದಲ್ಲಿ ಸುದೀರ್ಘ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದೇವ್ ಅವರ ಅಕಾಲಿಕ ಅಗಲಿಕೆಗೆ ಸ್ಯಾಂಡಲ್ವುಡ್ ತಾರೆಯರು, ಸಂಗೀತ ನಿರ್ದೇಶಕರು, ಆರ್ಸಿಬಿ ಅಭಿಮಾನಿಗಳು ಹಾಗೂ ಅಪಾರ ಕಲಾಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.


