ಬೆಳ್ತಂಗಡಿ : ಇಲ್ಲಿನ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕಿನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ (Pigmy Collector) ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ನವೆಂಬರ್ 11ರಂದು ರಾತ್ರಿ ನಡೆದಿದೆ. ಮೃತರನ್ನು ಬಾಳೆಹಿತ್ತಿಲು ನಿವಾಸಿ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ (ಅವಿವಾಹಿತ) ಎಂದು ಗುರುತಿಸಲಾಗಿದೆ.


ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿದ್ದ ಪುನೀತ್, ಹಗಲಿನಲ್ಲಿ ತಮ್ಮ ಸಹೋದರರು ಹಾಗೂ ಸಂಬಂಧಿಕರೊಂದಿಗೆ ಬಹಳ ಉತ್ಸಾಹದಿಂದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಆದರೆ, ನ. 11ರ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟದಲ್ಲಿ ನೇಣು ಹಾಕಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಮೃತರು ತಂದೆ ಸೇಸಪ್ಪ ಗೌಡ, ತಾಯಿ ವನಜಾ, ಸಹೋದರ ಶೇಖರ್, ಸಹೋದರಿ ದಿವ್ಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



