ಪಡುಬಿದ್ರಿ: ಹೆಜಮಾಡಿ ಟೋಲ್ ಬಳಿ ಭಾರಿ ಪ್ರಮಾಣದ ಅಕ್ರಮ ಗೋವಾ ಮದ್ಯ ವಶ-ಕಾರವಾರದ ನಾಲ್ವರ ಬಂಧನ..!

Prakhara News
2 Min Read

ಪಡುಬಿದ್ರಿ: ಗೋವಾ ರಾಜ್ಯದಿಂದ ಮಂಗಳೂರಿಗೆ ಅಕ್ರಮವಾಗಿ ಕಾರು ಹಾಗೂ ಪಿಕ್‌ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ ₹14.35 ಲಕ್ಷ ಮೌಲ್ಯದ ಮದ್ಯವನ್ನು ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಬುಧವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಾಗಾಟಕ್ಕೆ ಬಳಸಿದ್ದ ವಾಹನಗಳ ಸಮೇತ ಕಾರವಾರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರವಾರ ತಾಲೂಕಿನ ಕಿನ್ನಾರ ಗ್ರಾಮದ ವಿನಯ್ (47), ನಂದಗಡದ ಗಜಾನನ ಮಹಾಬಲೇಶ್ವರ ನಾಯ್ಕ್ (45), ಅಮದಹಳ್ಳಿಯ ಸುಜಿತ್ ತಾಳೆಕೆರೆ (25) ಹಾಗೂ ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಬಂಧಿತ ಆರೋಪಿಗಳು. ಬಂಧಿತರ ಪೈಕಿ ವಿನಯ್‌ ಎಂಬಾತನ ಮೇಲೆ ಈಗಾಗಲೇ ಕಾರವಾರ ಜಿಲ್ಲೆಯ ಚಿತ್ತಾಕುಲ, ಕಾರವಾರ ಗ್ರಾಮಾಂತರ ಹಾಗೂ ಅಬಕಾರಿ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಇವರಿಗೆ ಲಭಿಸಿದ ಖಚಿತ ಮಾಹಿತಿಯನ್ನಾಧರಿಸಿ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ ಮದ್ಯ ಸಾಗಾಟ ಮಾಡುತ್ತಿದ್ದ ಮಹೀಂದ್ರಾ ಪಿಕ್‌ಅಪ್ ವಾಹನ ಹಾಗೂ ಅದಕ್ಕೆ ಎಸ್ಕಾರ್ಟ್ ಮಾಡುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ಮದ್ಯ: 2,583 ಲೀಟರ್ ಗೋವಾ ಮದ್ಯದ ಬಾಕ್ಸ್‌ಗಳು (ಮೌಲ್ಯ ಸುಮಾರು ₹14,35,000)
ವಾಹನಗಳು: ಮಹೀಂದ್ರಾ ಪಿಕ್ ಇನ್ಸುಲೇಟರ್ ವಾಹನ (ಮೌಲ್ಯ ₹5,00,000) ಹಾಗೂ ಮಾರುತಿ ಸ್ವಿಫ್ಟ್ ಕಾರು (ಮೌಲ್ಯ ₹3,00,000)
ಒಟ್ಟು ಜಪ್ತಿಯಾದ ಸ್ವತ್ತುಗಳ ಮೌಲ್ಯ: ₹22,35,000
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಕಾಪು ಸಿಪಿಐ ಅಜ್ಮತ್ ಆಲಿ ಜಿ.ಸಿ. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಠಾಣೆಯ ಪಿಎಸ್‌ಐ ಶಕ್ತಿವೇಲು ಎಂ., ತನಿಖಾ ಪಿಎಸ್‌ಐ ಅನಿಲ್‌ ಕುಮಾರ್ ಟಿ. ನಾಯ್ಕ್, ಎಎಸ್‌ಐಗಳಾದ ರಾಜೇಶ್, ಗಿರೀಶ್ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಜೀವನ್, ಸತೀಶ್ ಬೆಳ್ಳೆ, ಶಿವಾನಂದ ಪೂಜಾರಿ, ಅಶ್ವಿನ್ ಕುಮಾರ್, ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಮಿಣಿ ಮತ್ತು ಸಿಡಿಆರ್ ವಿಭಾಗದ ದಿನೇಶ್ ಪಾಲ್ಗೊಂಡಿದ್ದರು.

Share This Article
Leave a Comment