ಚಿಕ್ಕಮಗಳೂರು: ಬೆಳ್ಳಿ ಮಾರಿದ ಹಣ ಕೊಡದೆ ಎಸ್ಕೇಪ್ ಆಗಿದ್ದ ಆರೋಪಿ ಬಂಧನ – 41 ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಂಡ ಖಾಕಿ

Prakhara News
1 Min Read

ಚಿಕ್ಕಮಗಳೂರು: ಬೆಳ್ಳಿ ಮಾರಾಟದ ಹೆಸರಿನಲ್ಲಿ ನಡೆದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ವಂಚನೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂಬಿಸಿ ಹಣ ದೋಚಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಅರೆಸ್ಟ್ ಮಾಡಿರುವ ಖಾಕಿ ಪಡೆ, ಆತನಿಂದ 41.90 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದೆ.

ಕಲ್ಯಾಣ ನಗರದ ನಿವಾಸಿ ರಮೇಶ್ ಎಂಬುವವರು ತಮಗೆ ಪರಿಚಯವಿದ್ದ ನಾಗರಾಜ್ ಮತ್ತು ಪ್ರಸಾದ್ ಎಂಬುವವರನ್ನು ನಂಬಿ ಮಾರಾಟಕ್ಕಾಗಿ ಬೆಳ್ಳಿ ನೀಡಿದ್ದರು. ಆದರೆ ಆ ಬೆಳ್ಳಿಯನ್ನು ಮಾರಿ ಬಂದ 45.20 ಲಕ್ಷ ರೂಪಾಯಿ ಹಣದೊಂದಿಗೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಮೋಸ ಹೋದದ್ದನ್ನು ಅರಿತ ರಮೇಶ್ ತಕ್ಷಣವೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ಅವರು ಆರೋಪಿಗಳ ಬೇಟೆಗೆ ತಕ್ಷಣವೇ ವಿಶೇಷ ತಂಡವನ್ನು ರಚಿಸಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಹಾಗೂ ಉಪಾಧೀಕ್ಷಕ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಅಖಾಡಕ್ಕಿಳಿದ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್‌ ನೇತೃತ್ವದ ಟೀಮ್, ವೈಜ್ಞಾನಿಕ ಹಾಗೂ ತಾಂತ್ರಿಕ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿತ್ತು. ಪೊಲೀಸರ ಹದ್ದಿನ ಕಣ್ಣಿನ ಕಾರ್ಯಾಚರಣೆಗೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಕೋಡಳ್ಳಿಯ ನಿವಾಸಿ ನಾಗರಾಜ ಎಂಬಾತನನ್ನು ಕದ್ದುಕುಳಿತಿದ್ದ ಜಾಗದಲ್ಲೇ ದಸ್ತಗಿರಿ ಮಾಡಲಾಗಿದೆ. ಸದ್ಯ ಬಂಧಿತನಿಂದ ಸಿಂಹಪಾಲು ಹಣವನ್ನು ರಿಕವರಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತನಿಖೆ ಚುರುಕುಗೊಂಡಿದೆ. ಕೇವಲ ಕೆಲವೇ ದಿನಗಳಲ್ಲಿ ಪ್ರಕರಣದ ಬೆನ್ನುಹತ್ತಿ ಆರೋಪಿಯನ್ನು ಹಳೇ ಸ್ಯಾಂಪಲ್ ಸಮೇತ ಲಾಕ್ ಮಾಡಿದ ಇಡೀ ಕ್ರೈಂ ಟೀಮ್ ಕಾರ್ಯಕ್ಷಮತೆಗೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೂಕ್ತ ಬಹುಮಾನವನ್ನೂ ಘೋಷಿಸಿದ್ದಾರೆ.

Share This Article
Leave a Comment