ಬೆಳ್ತಂಗಡಿ: ತಾಲೂಕಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ “ಪವನ್” ಹೆಸರಿನ ಕ್ಯಾಂಟಿನ್ನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


ಕ್ಯಾಂಟಿನ್ ನಡೆಸುತ್ತಿದ್ದ ಸುಂದರ್ ಶೆಟ್ಟಿ ಹಾಗೂ ಅವರ ಪರಿಚಯದ ಉಸ್ಮಾನ್ ಎಂಬವರು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಕ್ಯಾಂಟಿನ್ ಒಳಗಿನ ಕೋಣೆಯಲ್ಲಿ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸಿಕಂದರ್ ಪಾಷಾ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿತ್ತು.

ಪೊಲೀಸರು ಗುಪ್ತವಾಗಿ ಪರಿಶೀಲನೆ ನಡೆಸಿದ ವೇಳೆ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೇ 10ರ ಸಂಜೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 48/2026ರಂತೆ ಪ್ರಕರಣ ದಾಖಲಾಗಿದ್ದು, ಐಟಿಪಿ ಕಾಯ್ದೆಯ ಕಲಂ 3, 4, 5 ಹಾಗೂ ಬಿ.ಎನ್.ಎಸ್ ಕಲಂ 143(2) ಅಡಿಯಲ್ಲಿ ತನಿಖೆ ಮುಂದುವರಿದಿದೆ.


