ಕುಂದಾಪುರ: ಬಾರ್‌ನಲ್ಲಿ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಯುವಕನ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಎಫ್‌ಐಆರ್..!

Prakhara News
2 Min Read

ಕುಂದಾಪುರ : ಬಾರ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿ, ಸದ್ದು ಮಾಡದಂತೆ ವಿನಂತಿಸಿದ್ದಕ್ಕೆ ಯುವಕನೋರ್ವನ ಮೇಲೆ ಸೋಡಾ ಬಾಟಲಿಯಿಂದ ಹೊಡೆದು ತೀವ್ರ ರಕ್ತಗಾಯಗೊಳಿಸಿದ ಘಟನೆ ಬಗ್ವಾಡಿ ಕ್ರಾಸ್ ಸಮೀಪದ ‘N.T.S ಪ್ಯಾಲೇಸ್ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ನಡೆದಿದೆ.

ದೇವಲ್ಕುಂದ ಗ್ರಾಮದ ನಿವಾಸಿ ದಿನೇಶ್‌ ಲೂವಿಸ್‌ (36) ಹಲ್ಲೆಗೊಳಗಾದ ಗಾಯಾಳು. ಹಲ್ಲೆ ನಡೆಸಿದ ಆರೋಪಿಗಳಾದ ಸಚಿನ್, ರಜತ್, ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಎಂಬ ನಾಲ್ವರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 26/09/2026 ರಂದು ರಾತ್ರಿ ಸುಮಾರು 8:45 ಗಂಟೆಯ ವೇಳೆಗೆ ದಿನೇಶ್ ಲೂವಿಸ್ ಅವರು ಬಗ್ವಾಡಿ ಕ್ರಾಸ್‌ನ N.T.S ಪ್ಯಾಲೇಸ್ ಬಾರ್‌ನಲ್ಲಿ ಊಟಕ್ಕೆ ಕುಳಿತಿದ್ದರು. ಈ ವೇಳೆ ಪಕ್ಕದ ಟೇಬಲ್‌ನಲ್ಲಿ ದಿನೇಶ್‌ಗೆ ಪರಿಚಯವಿದ್ದ ಸಚಿನ್, ರಜತ್, ಶ್ರೀಕಾಂತ್ ಶೆಟ್ಟಿ ಹಾಗೂ ಮಂಜು ಶೆಟ್ಟಿ ಕುಳಿತು ಜೋರಾದ ಧ್ವನಿಯಲ್ಲಿ ಕೂಗಾಡುತ್ತಾ ಊಟ ಮಾಡುತ್ತಿದ್ದರು. ಇದರಿಂದ ಇತರರಿಗೆ ತೊಂದರೆಯಾಗುತ್ತಿದ್ದುದನ್ನು ಗಮನಿಸಿದ ದಿನೇಶ್, “ಈ ರೀತಿ ಕೂಗಾಡಿದರೆ ತೊಂದರೆಯಾಗುತ್ತದೆ, ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರಜತ್ ಎಂಬಾತ “ನಮಗೆ ಹೇಳಲು ನೀನ್ಯಾರು?” ಎಂದು ಅವಾಚ್ಯ ಶಬ್ದಗಳಿಂದ ಬೈದು ದಿನೇಶ್‌ರನ್ನು ಕೈಯಿಂದ ದೂಡಿದ್ದಾನೆ.

ಕೂಡಲೇ ರೊಚ್ಚಿಗೆದ್ದ ಸಚಿನ್ ಎಂಬಾತ ಪಕ್ಕದಲ್ಲಿದ್ದ ಸೋಡಾ ಬಾಟಲಿಯಿಂದ ದಿನೇಶ್ ಅವರ ತಲೆಗೆ ಹೊಡೆದಿದ್ದಾನೆ. ಬಾಟಲಿ ಒಡೆದು ದಿನೇಶ್ ಅವರ ತಲೆ ಹಾಗೂ ಎಡ ಕೆನ್ನೆಗೆ ಚೂರುಗಳು ತಾಗಿ ತೀವ್ರ ರಕ್ತಗಾಯವಾಗಿದೆ. ಇದೇ ವೇಳೆ ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಸೇರಿ ದಿನೇಶ್‌ಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಅಸಭ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಬಾರ್ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಹಾಗೂ ಅಕ್ಕಪಕ್ಕದಲ್ಲಿದ್ದವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಗಾಯಾಳು ದಿನೇಶ್‌ರನ್ನು ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.

ಗಾಯಾಳು ನೀಡಿದ ದೂರಿನನ್ವಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 118(1), 352, 351(2) ಜೊತೆಗೆ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment