ಸುಬ್ರಹ್ಮಣ್ಯ: 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯ ಬಂಧನ..!

Prakhara News
1 Min Read

ಸುಬ್ರಹ್ಮಣ್ಯ: ಸುಮಾರು 26 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಕೇರಳದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ತ್ರಿಶೂರು ನಿವಾಸಿ ಟೋಮಿ ಅಲಿಯಾಸ್ ಥಾಮಸ್ ಬಂಧಿತ ಆರೋಪಿ. 2000ನೇ ಇಸವಿಯ ಸೆಪ್ಟೆಂಬರ್ 10ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುತ್ತಿಗಾರು ಎಂಬಲ್ಲಿ ಈ ಕೊಲೆ ನಡೆದಿತ್ತು. ಕೇರಳ ಮೂಲದ ಜೊಯ್, ಶೆಲ್ಟನ್ ಮತ್ತು ಟೋಮಿ ಅಲಿಯಾಸ್ ಥಾಮಸ್ ಎಂಬ ಮೂವರ ನಡುವೆ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಜಗಳ ಉಂಟಾಗಿತ್ತು. ಈ ವೇಳೆ ವಿಕೋಪಕ್ಕೆ ಹೋದ ಜಗಳದಲ್ಲಿ ಟೋಮಿ ಅಲಿಯಾಸ್ ಥಾಮಸ್, ಜೊಯ್ ಅವರಿಗೆ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 302 ಹಾಗೂ 34ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆರೋಪಿ ಟೋಮಿ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿತ್ತು.

ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು, ನವೆಂಬರ್ 12ರಂದು ಕೇರಳದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಬ್ರಹ್ಮಣ್ಯ ಠಾಣೆಯ ಎಎಸ್‌ಐ ಸ್ಕರೀಯಾ, ಸುಳ್ಯ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹರೀಶ್ ಹಾಗೂ ಪುತ್ತೂರು ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಆದ್ರಾಂ ಪಾಲ್ಗೊಂಡಿದ್ದರು.

ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನವೆಂಬರ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.

Share This Article
Leave a Comment