ಬ್ರಹ್ಮಾವರದಲ್ಲಿ ಡಬಲ್ ಮರ್ಡರ್ : ಕ್ಷುಲ್ಲಕ ಜಗಳಕ್ಕೆ ಹೆತ್ತ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಮಗ..!

Prakhara News
1 Min Read

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಗಾಂಧಿನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಹೆತ್ತ ತಂದೆ-ತಾಯಿಯನ್ನೇ ಮಗ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಗಾಂಧಿನಗರದ ನಿವಾಸಿಗಳಾದ ಮೆಹಬೂಬ್ ಅಲಿ ಮತ್ತು ಅವರ ಪತ್ನಿ ಶಂಶಾದ್ ಬೇಗಂ ಮೃತಪಟ್ಟ ದುರ್ದೈವಿ ದಂಪತಿ. ಮೆಹಬೂಬ್ ಅಲಿ ಅವರು ಲಾರಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಗ ಶಾಹಿದ್ ಅಲಿ (ಆರೋಪಿ) ಈ ದಾರುಣ ಕೃತ್ಯ ಎಸಗಿದ್ದಾನೆ.

ಭಾನುವಾರ ರಾತ್ರಿ ಮನೆಯಲ್ಲಿ ತಂದೆ-ತಾಯಿಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಉಂಟಾಗಿದೆ. ಈ ವೇಳೆ ತೀವ್ರ ಸಿಟ್ಟಿಗೆದ್ದ ಶಾಹಿದ್ ಅಲಿ ಮನೆಯಲ್ಲಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಇಬ್ಬರ ತಲೆ ಹಾಗೂ ದೇಹಕ್ಕೆ ಮನಸೋಇಚ್ಛೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ದಂಪತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಹತ್ಯೆಯ ಬಳಿಕ ಆರೋಪಿಯೇ ಬ್ರಹ್ಮಾವರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಬ್ರಹ್ಮಾವರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಶಾಹಿದ್ ಅಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಕುಟುಂಬ ಕಲಹ ಅಥವಾ ಬೇರೇನಾದರೂ ಹಿನ್ನೆಲೆ ಇದೆಯೇ ಎಂಬ ಆಯಾಮಗಳಲ್ಲಿ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment