ಉಗ್ರರ ದಾಳಿ ಬೆಂಬಲಿಸಿ ಕಾಮೆಂಟ್ : ಕೇರಳದ ಯುವಕನ ಬಂಧನ

Prakhara News
1 Min Read

ಕೇರಳಮ್ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ
ಪ್ರವಾಸಿಗರ ಮೇಲೆ ನಡೆದಿದ್ದ ಉಗ್ರರ ದಾಳಿಯನ್ನು ಸಮರ್ಥಿಸಿ ಸೋಶಿಯಲ್ ಮೀಡಿಯಾದಲ್ಲಿ ದೇಶವಿರೋಧಿ ಕಾಮೆಂಟ್ ಮಾಡಿದ್ದ ಕೇರಳದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಎರ್ನಾಕುಲಂ ಜಿಲ್ಲೆಯ ನಾರ್ತ್ ಪರವೂ‌ರ್ ನಿವಾಸಿ ಮೊಹಮ್ಮದ್ ಸನೂಪ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸನೂಪ್, ಶುಕ್ರವಾರ ಮುಂಜಾನೆ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪಹಲ್ಲಾಮ್‌ನಲ್ಲಿ ನಡೆದಿದ್ದ ಭೀಕರ ಉಗ್ರರ ದಾಳಿಯಲ್ಲಿ ಮಲಯಾಳಿ ಮೂಲದ ರಾಮಚಂದ್ರನ್ ಎಂಬುವವರು ಮೃತಪಟ್ಟಿದ್ದರು. ಈ ಘಟನೆಯ ಕುರಿತು ಪ್ರಕಟವಾಗಿದ್ದ ಮಾಧ್ಯಮ ವರದಿಯೊಂದರ ಕೆಳಗೆ, ಮೃತ ರಾಮಚಂದ್ರನ್ ಅವರ ಪುತ್ರಿಯ ಹೇಳಿಕೆಯನ್ನು ಉಲ್ಲೇಖಿಸಿ ಆರೋಪಿ ಸನೂಪ್‌ ಅತ್ಯಂತ ಆಕ್ಷೇಪಾರ್ಹ ಹಾಗೂ ದೇಶವಿರೋಧಿ ಕಾಮೆಂಟ್ ಮಾಡಿದ್ದನು.

ವಿಮಾನ ನಿಲ್ದಾಣದಲ್ಲಿ ಬಂಧಿತನಾದ ಆರೋಪಿಯನ್ನು ಬಳಿಕ ಮುಟ್ಟಂ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖ‌ರ್, ನಮ್ಮದೇ ರಾಜ್ಯದ ವ್ಯಕ್ತಿಯೊಬ್ಬರು ಉಗ್ರರ ದಾಳಿಯಲ್ಲಿ ಹತ್ಯೆಯಾಗಿದ್ದನ್ನು ಸಂಭ್ರಮಿಸುವ ಮಟ್ಟಿಗೆ ಯುವಕನ ಮಿದುಳು ತೊಳೆಯಲ್ಪಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ಕೇವಲ ಪ್ರತ್ಯೇಕ ಘಟನೆಯಲ್ಲ, ಬದಲಿಗೆ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳ ವರ್ಷಗಳ ತುಷ್ಟಿಕರಣ ಮತ್ತು ರಾಜಕೀಯ ಬೂಟಾಟಿಕೆಯ ಫಲಿತಾಂಶವಾಗಿದೆ ಎಂದು ಆರೋಪಿಸಿದ್ದಾರೆ.

Share This Article
Leave a Comment