ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭೀಕರ ತ್ರಿಕೋನ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿವಾಹಿತ ಮಹಿಳೆಯ ವಿಚಾರವಾಗಿ ಇಬ್ಬರು ಪುರುಷರ ನಡುವೆ ನಡೆದ ರಕ್ತಸಿಕ್ತ ಜಗಳದಲ್ಲಿ ಓರ್ವನ ಮುಂಗೈ ಸಂಪೂರ್ಣವಾಗಿ ಕತ್ತರಿಸಿ ನೆಲಕ್ಕೆ ಬಿದ್ದಿರುವ ಘಟನೆ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ಸಂಭವಿಸಿದೆ.


ದಾಳಿಯಿಂದಾಗಿ ಅರುಣ್ (35) ಎಂಬುವವರ ಮುಂಗೈ (ಹಸ್ತ) ತುಂಡಾಗಿದ್ದು, ಸದ್ಯ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶೇಷಗಿರಿ (40) ಎಂಬಾತನನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಅಡಿಗೆಬೈಲು ಗ್ರಾಮದ ನಿವಾಸಿಯಾದ ನಾಗರತ್ನ ಎಂಬ ವಿವಾಹಿತ ಮಹಿಳೆ ಕಳೆದ ಕೆಲವು ದಿನಗಳಿಂದ ತನ್ನ ಗಂಡನಿಂದ ದೂರವಾಗಿ ಒಂಟಿಯಾಗಿ ನೆಲೆಸಿದ್ದರು. ಈಕೆಯ ವಿಚಾರವಾಗಿ ಗ್ರಾಮದ ಶೇಷಗಿರಿ ಮತ್ತು ಅರುಣ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಮನಸ್ತಾಪ ಹಾಗೂ ಗಲಾಟೆ ನಡೆಯುತ್ತಿತ್ತು. ಬುಧವಾರವೂ ಸಹ ಇವರಿಬ್ಬರ ನಡುವೆ ಇದೇ ವಿಷಯವಾಗಿ ತೀವ್ರ ವಾಗ್ವಾದ ನಡೆದಿದೆ.

ಮಾತು ಮುರಿದು ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕ್ರೋಶಗೊಂಡ ಶೇಷಗಿರಿ, ಅರುಣ್ನನ್ನು ಮುಗಿಸಲು ನೇರವಾಗಿ ಮಾರಕಾಸ್ತ್ರವಾದ ಲಾಂಗ್ (ಮಚ್ಚು) ಹಿಡಿದು ಬೀಸಿದ್ದಾನೆ. ಈ ವೇಳೆ ತನ್ನ ತಲೆಗೆ ಬೀಳುತ್ತಿದ್ದ ಮಚ್ಚಿನ ಏಟಿನಿಂದ ಜೀವ ಉಳಿಸಿಕೊಳ್ಳಲು ಅರುಣ್ ಅಸಹಾಯಕವಾಗಿ ತನ್ನ ಕೈಯನ್ನು ಅಡ್ಡ ಕೊಟ್ಟಿದ್ದಾರೆ. ದಾಳಿಯ ಭೀಕರತೆಗೆ ಅರುಣ್ ಅವರ ಮುಂಗೈ ಹಸ್ತದ ಭಾಗ ಸಂಪೂರ್ಣವಾಗಿ ಕತ್ತರಿಸಿ ರಸ್ತೆಯ ಮೇಲೆ ಬಿದ್ದಿದೆ.

ದಾಳಿಯ ಬೆನ್ನಲ್ಲೇ ಅರುಣ್ ರಕ್ತದ ಮಡುವಿನಲ್ಲಿ ಬಿದ್ದು ಕಿರುಚಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಧಾವಿಸಿ, ಕತ್ತರಿಸಿ ಬಿದ್ದಿದ್ದ ಹಸ್ತ ಹಾಗೂ ರಕ್ತದ ಮಡುವಿನಲ್ಲಿದ್ದ ಅರುಣ್ನನ್ನು ರಕ್ಷಿಸಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಕತ್ತರಿಸಿದ ಹಸ್ತವನ್ನು ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಿಸುವ (Replantation) ಸಾಧ್ಯತೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತುರ್ತಾಗಿ ರವಾನಿಸಲಾಗಿದೆ.


