ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ನಿರ್ಧಾರಗಳಿಂದಾಗಿ ಸಾರ್ವಜನಿಕ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಜನನ-ಮರಣ ಪ್ರಮಾಣಪತ್ರಗಳ ವಿತರಣೆಯಲ್ಲಿನ ಉದಾಸೀನತೆ ಹಾಗೂ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಯನ್ನು ಮುಡಾಗೆ ವರ್ಗಾಯಿಸಿರುವ ಗೊಂದಲದಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಎಸ್ಐಆರ್ (SIR) ಕರ್ತವ್ಯಕ್ಕೆ ನೇಮಿಸಿರುವ ಹಿನ್ನೆಲೆಯಲ್ಲಿ, ಪಾಲಿಕೆಯ ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ “ಒಂದು ತಿಂಗಳು ಅರ್ಜಿ ಸ್ವೀಕಾರ ಬಂದ್” ಎಂಬ ಬೋರ್ಡ್ ತೂಗುಹಾಕಲಾಗಿತ್ತು. ಆಡಳಿತಾಧಿಕಾರಿ ಮೂಲಕ ಪಾಲಿಕೆ ನಡೆಸುತ್ತಿರುವ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ದಾಖಲಾತಿಗೆ ಜನನ ಪ್ರಮಾಣಪತ್ರ ಬೇಕಿರುವ ಪೋಷಕರು ಹಾಗೂ ಪಾಸ್‌ಪೋರ್ಟ್ ಆಕಾಂಕ್ಷಿಗಳು ದಾರಿ ಕಾಣದೆ ಕಂಗಾಲಾಗಿದ್ದರು. ಸಾರ್ವಜನಿಕರು ಶಾಸಕರಿಗೆ ದೂರು ನೀಡಲು ಮುಂದಾಗುತ್ತಿದ್ದಂತೆ ಎಚ್ಚೆತ್ತ ಪಾಲಿಕೆ, ಅರ್ಜಿ ಸ್ವೀಕಾರಕ್ಕೆ ಮುಂದಾಗಿದೆಯಾದರೂ “ಪ್ರಮಾಣಪತ್ರಕ್ಕೆ ಅರ್ಜೆಂಟ್ ಮಾಡುವ ಹಾಗಿಲ್ಲ” ಎಂಬ ವಿಚಿತ್ರ ಷರತ್ತು ವಿಧಿಸುತ್ತಿದೆ. “ಒಂದು ತಿಂಗಳು ಕೆಲಸ ಮಾಡದಿದ್ದರೆ ಸಾರ್ವಜನಿಕರಿಂದ ಯಾವುದೇ ತೆರಿಗೆ ವಸೂಲಿ ಮಾಡುವುದಿಲ್ಲ ಎಂದೂ ಪಾಲಿಕೆ ಬೋರ್ಡ್ ಹಾಕಲಿ” ಎಂದು ನಾಗರಿಕರು ಆಗ್ರಹಿಸಿದ್ದಾರೆ. ಪಾಲಿಕೆ ಮುಂದೆ ಪ್ರತಿನಿತ್ಯ ಜನರು ಸಾಲುಗಟ್ಟಿ ನಿಲ್ಲುತ್ತಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿಗಳು ನಿರಂತರವಾಗಿ ನಡೆಯುತ್ತಿವೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆ ಈಗ ಸಂಪೂರ್ಣವಾಗಿ ಕಗ್ಗಂಟಾಗಿದೆ. ಈ ಹಿಂದೆ ಕಂದಾಯ ಇಲಾಖೆಯಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಲಭವಾಗಿ ಆಗುತ್ತಿದ್ದ ಭೂಪರಿವರ್ತನೆಯನ್ನು ರಾಜ್ಯ ಸರ್ಕಾರ ಈಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವಹಿಸಿಕೊಟ್ಟಿದೆ. ಆದರೆ, ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಈ ನಿರ್ಧಾರ ಕೈಗೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ನಕ್ಷೆ (ಸ್ಕೆಚ್) ಇಲ್ಲದೆ ಕನ್ವರ್ಷನ್ ಮಾಡಲು ಸಾಧ್ಯವಿಲ್ಲ ಎಂದು ಮುಡಾ ಅಧಿಕಾರಿಗಳು ಹೇಳುತ್ತಿದ್ದರೆ, ಸರ್ಕಾರದ ಆದೇಶದ ಪ್ರಕಾರ ನಾವು ನಕ್ಷೆ ಮಾಡುವಂತಿಲ್ಲ ಎಂದು ಕಂದಾಯ ಇಲಾಖೆಯ ಸರ್ವೇಯರ್‌ಗಳು ಕೈಚೆಲ್ಲಿದ್ದಾರೆ.

ಇದರಿಂದಾಗಿ ಯಾವುದೇ ಸೈಟ್ ಮಾರಾಟ ಅಥವಾ ಖರೀದಿ ಮಾಡಲು ಸಾಧ್ಯವಾಗದೆ, ತುರ್ತು ಅಗತ್ಯವಿರುವ ಸಾರ್ವಜನಿಕರು ಅಸಹಾಯಕರಾಗಿದ್ದಾರೆ. ಇತ್ತ ಮುಡಾದಲ್ಲಿಯೂ ಸಿಬ್ಬಂದಿ ಕೊರತೆಯಿಂದಾಗಿ ಕೆಲಸಗಳು ಸಕಾಲಕ್ಕೆ ನಡೆಯುತ್ತಿಲ್ಲ. ಒಟ್ಟಾರೆಯಾಗಿ ಪ್ರಾಪರ್ಟಿ ಕಾರ್ಡ್, ಆರ್.ಟಿ.ಸಿ, ಕನ್ವರ್ಷನ್ ಎಲ್ಲವೂ ಅಯೋಮಯವಾಗಿದ್ದು, ಸರ್ವರ್ ಮತ್ತು ತಾಂತ್ರಿಕ ದೋಷಗಳ ನೆಪದಲ್ಲಿ ತಿಂಗಳುಗಟ್ಟಲೆ ಜನರನ್ನು ಅಲೆದಾಡಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಹಸ್ತಕ್ಷೇಪ ನಡೆಸಿ ಈ ಎಲ್ಲಾ ತೊಂದರೆಗಳನ್ನು ಸರಿಪಡಿಸಬೇಕು ಎಂದು ಹೇಳಿದರು.


