ಮಂಗಳೂರು: ಬಜಪೆಯಲ್ಲಿ ನಾಪತ್ತೆಯಾಗಿದ್ದ 25 ವರ್ಷದ ಯುವಕನೊಬ್ಬ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದ ಹೊಂಡವೊಂದರಲ್ಲಿ ಮಾನವನ ಮೂಳೆಯ ತುಂಡುಗಳು, ತಲೆಬುರುಡೆಯ ಚೂರುಗಳು ಹಾಗೂ ಬಟ್ಟೆಗಳು ಪತ್ತೆಯಾಗಿವೆ.


ಮೂಲತಃ ಉತ್ತರ ಪ್ರದೇಶದವರಾದ, ಬಜಪೆಯಲ್ಲಿ ಇಟಾಚಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮನೀಶ್ ಶರ್ಮಾ (25) ಮೃತಪಟ್ಟ ದುರ್ದೈವಿ ಎಂದು ಶಂಕಿಸಲಾಗಿದೆ. ಈ ಕುರಿತು ಮನೀಶ್ ಅವರ ಸಹೋದರ ಸೋನು ಶರ್ಮಾ ಅವರು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೀಶ್ ಶರ್ಮಾ ಅವರು ಬಜಪೆ ವಿಮಾನ ನಿಲ್ದಾಣದ ಬಳಿ ಸೋಮಸುಂದರ್ ಎಂಬವರ ಬಳಿ ಇಟಾಚಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 27ರಂದು ಸಂಜೆ ಶ್ರವಣ್ ಎಂಬ ಸ್ನೇಹಿತನ ಜೊತೆ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ಸಹೋದರ ಸೋನು ಶರ್ಮಾ ಅಕ್ಟೋಬರ್ 30ರಂದು ಬೆಂಗಳೂರಿನಿಂದ ಬಜಪೆಗೆ ಬಂದು ಹುಡುಕಾಟ ನಡೆಸಿದ್ದರು.

ಮನೀಶ್ ಹಾಗೂ ಶ್ರವಣ್ ವಾಸವಿದ್ದ ರೂಮಿಗೆ ತೆರಳಿದಾಗ, ಅಲ್ಲಿ ಬಿಹಾರ ಮೂಲದ ಮತ್ತೊಬ್ಬ ಇಟಾಚಿ ಆಪರೇಟರ್ ಬೈಜುಲಾಲ್ ಇದ್ದನು. ಅಕ್ಟೋಬರ್ 27ರ ಸಂಜೆ ಶ್ರವಣ್ ಜೊತೆ ಮನೀಶ್ ಬೈಕಿನಲ್ಲಿ ಹೋಗಿದ್ದಾಗಿ ಮತ್ತು ರಾತ್ರಿ ಶ್ರವಣ್ ಒಬ್ಬನೇ ವಾಪಸ್ ಬಂದು, ‘ಮನೀಶ್ ಊರಿಗೆ ಹೋಗಿದ್ದಾನೆ’ ಎಂದು ಹೇಳಿ ತನಗೂ ಬೈಕಿನಲ್ಲಿ ಡ್ರಾಪ್ ಕೊಟ್ಟು ಹೋಗಿರುವುದಾಗಿ ಬೈಜುಲಾಲ್ ತಿಳಿಸಿದ್ದಾನೆ.

ಸಹೋದರನ ಸುಳಿವು ಸಿಗದ ಕಾರಣ ಅನುಮಾನಗೊಂಡ ಸೋನು ಶರ್ಮಾ, ತಂದೆಯ ಮೂಲಕ ಮನೀಶ್ ಅವರ ಬ್ಯಾಂಕ್ ಖಾತೆ ವಿವರ ಪಡೆದು ಪರಿಶೀಲಿಸಿದಾಗ ಅಕ್ಟೋಬರ್ 27ರಂದು ರಾಜನ್ ಎಂಬವರ ಖಾತೆಗೆ ₹63,720 ವರ್ಗಾವಣೆಯಾಗಿರುವುದು ಗೊತ್ತಾಗಿದೆ.
ವಿಚಾರಣೆ ನಡೆಸಿದಾಗ, ಶ್ರವಣ್ ಹೇಳಿದಂತೆ ರಾಜನ್ ಅವರು ಅಕ್ಟೋಬರ್ 28ರಂದು ಆ ಹಣವನ್ನು ಶ್ರವಣ್ ಖಾತೆಗೆ ವಾಪಸ್ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ.
ಬಜಪೆ ಪೊಲೀಸರು ತೋರಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಕ್ಟೋಬರ್ 27ರಂದು ಸಂಜೆ 6.41ಕ್ಕೆ ಮನೀಶ್ ಹಾಗೂ ಶ್ರವಣ್ ಬೈಕಿನಲ್ಲಿ ಹೋಗಿರುವುದು ಮತ್ತು ರಾತ್ರಿ 7.52ಕ್ಕೆ ಶ್ರವಣ್ ಒಬ್ಬನೇ ವಾಪಸ್ ಬರುತ್ತಿರುವುದು ಸೆರೆಯಾಗಿತ್ತು.
ನವೆಂಬರ್ 13ರಂದು ಬೆಳಗ್ಗೆ ಪೊಲೀಸರೊಂದಿಗೆ ಬಜಪೆ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ, ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದ ಕಚ್ಚಾ ರಸ್ತೆ ಬದಿಯ ಗೇಟ್ ಹತ್ತಿರದ ಹೊಂಡದಿಂದ ತೀವ್ರ ಕೊಳೆತ ವಾಸನೆ ಬಂದಿದೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಮಾನವನ ಮೂಳೆಗಳು, ತಲೆಬುರುಡೆಯ ಚೂರುಗಳು ಹಾಗೂ ಬಿದ್ದಿದ್ದ ಪ್ಯಾಂಟ್ ಮತ್ತು ಶರ್ಟ್ ಪತ್ತೆಯಾಗಿವೆ. ಹತ್ತಿರದಿಂದ ನೋಡಿದಾಗ ಆ ಶರ್ಟ್ ತನ್ನ ತಮ್ಮ ಮನೀಶ್ ಧರಿಸುತ್ತಿದ್ದೆದ್ದೇ ಎಂದು ಸೋನು ಶರ್ಮಾ ಗುರುತಿಸಿದ್ದಾರೆ.
ಸ್ನೇಹಿತ ಶ್ರವಣ್ನೇ ಹಣಕಾಸಿನ ವಿಚಾರ ಅಥವಾ ಇನ್ಯಾವುದೋ ದುರುದ್ದೇಶದಿಂದ ಮನೀಶ್ ಶರ್ಮಾನನ್ನು ಕೊಲೆ ಮಾಡಿ, ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.


