ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಸಂಭವಿಸಿದೆ.


ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಸುನೀತಾ ಮಹಾದೇವ್ ದೇಸಂಗಿ (34) ಕೊಲೆಯಾದ ದುರ್ದೈವಿ ಪತ್ನಿ. ಈ ಕೃತ್ಯ ಎಸಗಿದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ಪತಿ ಸಂಜೀವಕುಮಾರ್ (36) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮೃತ ಸುನೀತಾ ಅವರ ಸಹೋದರ ನೀಡಿದ ದೂರಿನ ಪ್ರಕಾರ, ದಂಪತಿಗಳು ವಗ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಆಗಾಗ ವೈವಾಹಿಕ ಕಲಹ ನಡೆಯುತ್ತಿದ್ದು, ಸಂಬಂಧಿಕರು ಸೇರಿ ರಾಜಿ ಸಂಧಾನ ಮಾಡಿಸಿದ್ದರು. ಇತ್ತೀಚೆಗೆ ಹೆರಿಗೆಯಾಗಿ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಅಕ್ಟೋಬರ್ 4ರಂದು ಆರೋಪಿ ಸಂಜೀವಕುಮಾರ್ ವಗ್ಗದ ಮನೆಗೆ ಕರೆತಂದಿದ್ದನು. ಅಕ್ಟೋಬರ್ 22ರಂದು ಸುನೀತಾ ಅವರು ತಮ್ಮ ಸಹೋದರನಿಗೆ ಕರೆ ಮಾಡಿ, ಪತಿ ತನಗೆ ತೀವ್ರ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.

ಅಕ್ಟೋಬರ್ 23ರ ಮುಂಜಾನೆ ಆರೋಪಿ ಸಂಜೀವಕುಮಾರ್, ಭಾವ ಅರುಣ್‌ಗೆ ಕರೆ ಮಾಡಿ ಸುನೀತಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದನು. ತಕ್ಷಣ ಬಂದು ನೋಡಿದಾಗ ಸುನೀತಾ ಮೃತಪಟ್ಟಿರುವುದು ಕಂಡುಬಂದಿದೆ. ಮೃತದೇಹವನ್ನು ಪರಿಶೀಲಿಸಿದಾಗ ಶರೀರದ ಮೇಲೆ ತೀವ್ರ ಹಲ್ಲೆ ನಡೆಸಿದ ಗಾಯಗಳು ಹಾಗೂ ರಕ್ತಸಿಕ್ತ ಗುರುತುಗಳು ಪತ್ತೆಯಾಗಿವೆ. ಅಕ್ಟೋಬರ್ 22ರ ರಾತ್ರಿಯಿಂದ ಅಕ್ಟೋಬರ್ 23ರ ಮುಂಜಾನೆಯ ನಡುವಿನ ಅವಧಿಯಲ್ಲಿ ಕೌಟುಂಬಿಕ ಕಲಹದ ನೆಪದಲ್ಲಿ ಸಂಜೀವಕುಮಾರ್ ಪತ್ನಿಗೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂಬುದು ದೂರಿನಿಂದ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2026, ಕಲಂ: 103 BNS (ಭಾರತೀಯ ನ್ಯಾಯ ಸಂಹಿತೆ) 2023 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಸಂಜೀವಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

