ಮಂಗಳೂರು: ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ಬಾಲ್ಕನಿಯ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಮೊಹಮ್ಮದ್ ಶಮಾಜ್ ಮೃತಪಟ್ಟಿರುವುದಾಗಿ ವರದಿಯಾಗಿದೆ.


ಸೆಪ್ಟೆಂಬರ್ 26ರಂದು ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಘಟನೆ ನಡೆದಿತ್ತು. ಜನದಟ್ಟಣೆಯ ನಡುವೆ ಬಾಲ್ಕನಿಯ ದುರ್ಬಲ ತಡೆಗೋಡೆ ಕುಸಿದು, ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದರು. ಘಟನೆಯಲ್ಲಿ ಐವರು ಗಾಯಗೊಂಡಿದ್ದರು.
ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಶಮಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭಿಕ ವರದಿಗಳಲ್ಲಿ ಅವರನ್ನು ಬ್ರೈನ್ ಡೆಡ್ ಎಂದು ವೈದ್ಯಕೀಯವಾಗಿ ಘೋಷಿಸಲಾಗಿತ್ತು. ನಂತರದ ವರದಿಗಳು ಅವರ ಸಾವಿನ ಬಗ್ಗೆ ಮಾಹಿತಿ ನೀಡಿವೆ.

ಘಟನೆಯಲ್ಲಿ ಗಾಯಗೊಂಡ ಇತರ ನಾಲ್ವರು ವಿದ್ಯಾರ್ಥಿಗಳಿಗೂ ಚಿಕಿತ್ಸೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ಸುರಕ್ಷತೆ ಹಾಗೂ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ಪರಿಶೀಲನೆ ನಡೆಯುತ್ತಿದೆ.

