ಮಂಗಳೂರು: ವರ್ಕ್ ಫ್ರಮ್ ಹೋಮ್ ಆಮಿಷ –ಮಹಿಳೆಯಿಂದ ₹18.28 ಲಕ್ಷ ಹಣ ಹಾಗೂ ಬಂಗಾರ ದೋಚಿದ ನಕಲಿ ಉದ್ಯೋಗ ಜಾಲ..!

Prakhara News
2 Min Read

ಮಂಗಳೂರು : ಮನೆಯಲ್ಲೇ ಕುಳಿತು ಉದ್ಯೋಗ ಮಾಡುವ ‘ವರ್ಕ್ ಫ್ರಮ್ ಹೋಮ್’ ಹಾಗೂ ‘ಗೋಲ್ಡ್ ಮಾರ್ಕೆಟಿಂಗ್ ಪ್ರಾಜೆಕ್ಟ್’ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಮಂಗಳೂರಿನ 44 ವರ್ಷದ ಮಹಿಳೆಯೊಬ್ಬರಿಂದ ಭಾರಿ ಪ್ರಮಾಣದ ಹಣ ಹಾಗೂ ಬಂಗಾರ ಸೇರಿ ಬರೋಬ್ಬರಿ ₹18.28 ಲಕ್ಷ ಮೌಲ್ಯದ ಸೊತ್ತನ್ನು ಸೈಬರ್ ವಂಚಕರು ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ವಂಚನೆಗೆ ಒಳಗಾದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸೂರ್ಯ, ಚೈತ್ರಾ ಹಾಗೂ ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಮಹಿಳೆಯು ಕಳೆದ ಏಪ್ರಿಲ್ 2026 ರಲ್ಲಿ ಉದ್ಯೋಗ ಹುಡುಕಾಟಕ್ಕಾಗಿ “Lokal Jobs” ಎಂಬ ಆ್ಯಪ್ ಬಳಸುತ್ತಿದ್ದಾಗ, ಹೆಸರಾಂತ “HCL Technology Ltd” ಕಂಪನಿಯ ಹೆಸರಿನಲ್ಲಿ ‘Work From Home’ ಉದ್ಯೋಗ ನೀಡಲಾಗುವುದು ಎಂಬ ಜಾಹೀರಾತು ಕಾಣಿಸಿಕೊಂಡಿತ್ತು. ಅದನ್ನು ನಂಬಿದ ಮಹಿಳೆ ಜಾಹೀರಾತಿನಲ್ಲಿದ್ದ +91 6366370852 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದಾರೆ. ಮನೆಯಲ್ಲೇ ಕುಳಿತು ಕೆಲಸ ಮಾಡಲು ಲ್ಯಾಪ್‌ಟಾಪ್ ನೀಡುವುದಾಗಿ ಹಾಗೂ ತಿಂಗಳಿಗೆ ₹30,000 ವೇತನ ಪಾವತಿಸುವುದಾಗಿ ನಂಬಿಸಿದ ಆರೋಪಿಗಳು, ‘ಅಪ್ಲಿಕೇಶನ್ ಫೀಸ್’, ‘ಸಾಫ್ಟ್‌ವೇರ್ ಇನ್‌ಸ್ಟಾಲೇಶನ್ ಶುಲ್ಕ’ ಹಾಗೂ ಪ್ರಕ್ರಿಯಾ ಶುಲ್ಕಗಳ ನೆಪದಲ್ಲಿ ಗೂಗಲ್ ಪೇ (Google Pay) ಮೂಲಕ ಹಂತ-ಹಂತವಾಗಿ ಒಟ್ಟು ₹2,87,728 ನಗದು ಹಣವನ್ನು ಪಡೆದುಕೊಂಡಿದ್ದಾರೆ.

ಅಷ್ಟಕ್ಕೇ ನಿಲ್ಲದ ವಂಚಕರು, ‘ಗೋಲ್ಡ್ ಮಾರ್ಕೆಟಿಂಗ್ ಪ್ರಾಜೆಕ್ಟ್’ನಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭಾಂಶ ಸಿಗಲಿದೆ ಹಾಗೂ ಚಿನ್ನಾಭರಣಗಳನ್ನು ಪರಿಶೀಲಿಸಿ ತಕ್ಷಣವೇ ಸುರಕ್ಷಿತವಾಗಿ ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ. ಆರೋಪಿಗಳ ಮಾತು ನಂಬಿದ ಮಹಿಳೆಯು ಎರಡು ಹಂತಗಳಲ್ಲಿ ಬರೋಬ್ಬರಿ 212.529 ಗ್ರಾಂ ತೂಕದ (ಅಂದಾಜು ಮೌಲ್ಯ ₹15,40,745) ಚಿನ್ನಾಭರಣಗಳನ್ನು ಆರೋಪಿಗಳ ವಶಕ್ಕೆ ನೀಡಿದ್ದಾರೆ.

ಚಿನ್ನಾಭರಣಗಳನ್ನು ಪಡೆದುಕೊಂಡ ನಂತರ ಅವುಗಳನ್ನು ವಾಪಸ್ ನೀಡದೆ ವಂಚಕರು ತಮ್ಮ ನೈಜ ರೂಪ ತೋರಿಸಿದ್ದಾರೆ. ಮತ್ತೆ ಹಣ ಹಾಗೂ ಚಿನ್ನ ನೀಡುವಂತೆ ಬೆದರಿಕೆ ಹಾಕಲು ಶುರುಮಾಡಿದ್ದಾರೆ. ಸೆಪ್ಟೆಂಬರ್ 25, 2026 ರಂದು ವಾಟ್ಸಾಪ್ (WhatsApp) ಮೂಲಕ ಸಂಪರ್ಕಿಸಿ, ಮೊದಲು ₹1,50,000 ಹಾಗೂ ನಂತರ ಕನಿಷ್ಠ ₹75,000 ನೀಡಲೇಬೇಕು, ಇಲ್ಲದಿದ್ದರೆ ಚಿನ್ನ ನೀಡುವುದಿಲ್ಲ ಎಂದು ಒತ್ತಾಯಿಸಿ ಸೈಬರ್ ಬ್ಲಾಕ್‌ಮೇಲ್ ಮಾಡಿದ್ದಾರೆ.

ತಾನು ಸಂಪೂರ್ಣವಾಗಿ ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆ, ಒಟ್ಟು ₹18,28,473 ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ. ಸೂರ್ಯ, ಚೈತ್ರಾ ಹಾಗೂ ಅವರ ಜತೆಗಿದ್ದ ನಕಲಿ ಆ್ಯಪ್ ಜಾಲದ ಸದಸ್ಯರು ಸಂಘಟಿತ ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Share This Article
Leave a Comment