ಮಂಗಳೂರು: ಶೇರು ಮಾರುಕಟ್ಟೆ ಹೂಡಿಕೆ 60 ವರ್ಷದ ವೃದ್ದೆ ಮಹಿಳೆಯಿಂದ ₹13.74 ಲಕ್ಷ ದೋಚಿದ ಸೈಬರ್ ಖದೀಮರು..!

Prakhara News
2 Min Read

ಮಂಗಳೂರು: ವಾಟ್ಸಾಪ್ ಗ್ರೂಪ್ ಹಾಗೂ ಶೇರು ಮಾರುಕಟ್ಟೆ (Share Trading) ಹೂಡಿಕೆಯ ಹೆಸರಿನಲ್ಲಿ ದುಪ್ಪಟ್ಟು ಲಾಭದ ಆಮಿಷವೊಡ್ಡಿ 60 ವರ್ಷದ ವೃದ್ಧೆ ಯೊಬ್ಬರಿಂದ ಬರೋಬ್ಬರಿ 13,74,319 ರೂಪಾಯಿ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಸೈಬರ್ ಕಳ್ಳರು ಭಾರಿ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 28-05-2026 ರಂದು ಸಂತ್ರಸ್ತೆ ತಮ್ಮ ಮೊಬೈಲ್‌ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ ‘wsfx Global Pay / Quantam AI’ ಹೆಸರಿನ ಗ್ರೂಪ್‌ನಲ್ಲಿ ಶೇರು ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಅಪರಿಚಿತರು ಸಂದೇಶ ಕಳುಹಿಸಿದ್ದರು. ಬಳಿಕ ಜೋಶುವಾ ಬಿ ಸಜಿ (Joshua B Saji) ಎಂಬ ಹೆಸರಿನಲ್ಲಿ +447824915764 ನಂಬರ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿ, ಹೂಡಿಕೆಯ ಬಗ್ಗೆ ವಿವರಿಸಿ ಹಣ ತೊಡಗಿಸಿದರೆ ದುಪ್ಪಟ್ಟು ಲಾಭ ಪಡೆಯಬಹುದು ಎಂದು ನಂಬಿಸಿದ್ದನು.

ಖದೀಮರ ಮಾತನ್ನು ನಂಬಿದ ಸಂತ್ರಸ್ತೆ, ಮೇ 28 ರಂದು ಮೊದಲ ಹಂತವಾಗಿ ₹15,819 ಹಣವನ್ನು ಯುಪಿಐ (UPI) ಮೂಲಕ ಪಾವತಿಸಿದ್ದರು. ನಂತರ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 28-05-2026 ರಿಂದ 27-08-2026 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹13,58,500 ಹಣವನ್ನು NEFT ಹಾಗೂ RTGS ಮೂಲಕ ವರ್ಗಾಯಿಸಿದ್ದರು. ಹೀಗೆ ಒಟ್ಟಾರೆಯಾಗಿ ₹13,74,319 ಹಣವನ್ನು ವಂಚಕರ ಖಾತೆಗೆ ಹಾಕಿದ್ದರು. ನಂತರದ ದಿನಗಳಲ್ಲಿ ತಮ್ಮ ಹೂಡಿಕೆ ಹಾಗೂ ಲಾಭದ ಹಣವನ್ನು ಡ್ರಾ (Withdraw) ಮಾಡಲು ಸಂತ್ರಸ್ತೆ ಯತ್ನಿಸಿದಾಗ ಸಾಧ್ಯವಾಗಿಲ್ಲ. ಅನುಮಾನಗೊಂಡು ಅಪರಿಚಿತ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆತ ಫೋನ್ ಸ್ವೀಕರಿಸಿಲ್ಲ.

ಸಂಶಯಗೊಂಡು ಸೈಬರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಿಸಿದಾಗ ತಾನು ಸಂಪೂರ್ಣವಾಗಿ ಆನ್‌ಲೈನ್ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಆನ್‌ಲೈನ್ ಮೂಲಕ ಶೇರು ಹೂಡಿಕೆಯ ಆಮಿಷವೊಡ್ಡಿ ಹಂತ ಹಂತವಾಗಿ ₹13,74,319 ಮೊತ್ತವನ್ನು ವಂಚನೆಯಿಂದ ವರ್ಗಾಯಿಸಿಕೊಂಡು ವಂಚಿಸಿದ ಅಪರಿಚಿತ ಸೈಬರ್ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಣ ರವಾನೆಯಾದ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

Share This Article
Leave a Comment