ಮಂಗಳೂರು: ಜೈಲಿನಲ್ಲಿ ಬೀಡಿ ಗಾಗಿ ಖೈದಿಯಿಂದ ರಂಪಾಟ – ಗ್ಯಾಸ್ ಬ್ಲಾಸ್ಟ್ ಮಾಡುವುದಾಗಿ ಜೈಲು ಅಧೀಕ್ಷಕರಿಗೆ ಬೆದರಿಕೆ, ಪ್ರಕರಣ ದಾಖಲು..!

Prakhara News
1 Min Read

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಯೊಬ್ಬ ಸಹ ಬಂಧಿಗಳನ್ನು ಒಟ್ಟುಗೂಡಿಸಿ, ಬೀಡಿ ನೀಡುವಂತೆ ಆಗ್ರಹಿಸಿ ಅಡುಗೆ ತಯಾರಿಗೆ ಅಡ್ಡಿಪಡಿಸಿ, ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಜೈಲು ಅಧೀಕ್ಷಕರಿಗೇ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಮಂಗಳೂರು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶರಣಬಸಪ್ಪ ಅವರು ನೀಡಿದ ದೂರಿನ ಮೇರೆಗೆ ಜೈಲಿನಲ್ಲಿರುವ ವಿಚಾರಣಾ ಬಂಧಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಜೈಲಿನಲ್ಲಿ ವಿಚಾರಣಾ ಬಂಧಿಯಾಗಿರುವ ಮೊಹಮ್ಮದ್ ಪೈಜಲ್ ಎಂಬಾತನು ದಿನಾಂಕ 14-09-2026 ರಂದು ಬೆಳಿಗ್ಗೆ ಸುಮಾರು 08:10 ಗಂಟೆಗೆ ಜೈಲಿನ ಅಡುಗೆ ಮನೆಗೆ ತೆರಳಿದ್ದನು. ಅಲ್ಲಿ ಪಾಕಶಾಲೆಯಲ್ಲಿ ಕೆಲಸ ಮಾಡುವ ಇತರ ಬಂಧಿಗಳಿಗೆ “ಅಧೀಕ್ಷಕರು ಬೀಡಿ ನೀಡುವವರೆಗೂ ಅಡುಗೆ ತಯಾರಿ ಮಾಡಬಾರದು” ಎಂದು ಬೆದರಿಕೆ ಹಾಕಿ ಮಧ್ಯಾಹ್ನದ ಅಡುಗೆಗೆ ತೀವ್ರ ಅಡಚಣೆ ಉಂಟುಮಾಡಿದ್ದನು.

ನಂತರ ಸಹ ಬಂಧಿಗಳನ್ನು ಒಟ್ಟುಗೂಡಿಸಿಕೊಂಡು ಅಧೀಕ್ಷಕರ ಕಚೇರಿಗೆ ಬಂದ ಆರೋಪಿ, “ನೀವು ಬೀಡಿ ಕೊಡುವವರೆಗೂ ಅಡುಗೆ ತಯಾರಿಸಲು ಬಿಡುವುದಿಲ್ಲ. ಒಂದು ವೇಳೆ ಅಡುಗೆ ತಯಾರಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ದೊಡ್ಡ ಗಲಾಟೆ ಮಾಡಿ ನಿಮ್ಮನ್ನು ಇಲ್ಲಿಂದ ವರ್ಗಾವಣೆ ಮಾಡಿಸುತ್ತೇವೆ” ಎಂದು ನೇರವಾಗಿ ಬೆದರಿಕೆ ಹಾಕಿದ್ದನು. ಅದೇ ದಿನ ಮಧ್ಯಾಹ್ನ ಜೈಲು ಸಿಬ್ಬಂದಿ ಅಡುಗೆ ಮನೆಯ ಗೇಟ್‌ಗೆ ಬೀಗ ಮುದ್ರೆ (Lock) ಮಾಡಿದಾಗ, ಆರೋಪಿ ಪೈಜಲ್ ಅಲ್ಲೇ ಇದ್ದ ಗ್ಯಾಸ್ ಸಿಲಿಂಡರ್‌ನಿಂದ ಗೇಟ್ ಮತ್ತು ಬೀಗದ ಕೀಗೆ ಜೋರಾಗಿ ಹೊಡೆದು ಬೀಗ ತೆರೆಯುವಂತೆ ಕೂಗಾಡಿದ್ದಾನೆ. ಅಷ್ಟೇ ಅಲ್ಲದೆ, ಗ್ಯಾಸ್ ಸಿಲಿಂಡರ್‌ಗಳನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಬಳಿಕ ಇತರ ಬಂದಿಗಳನ್ನು ಪ್ರಚೋದಿಸಿ, ಬೀಡಿ ಕೊಡುವವರೆಗೆ ಕೊಠಡಿಯೊಳಗೆ ತೆರಳದಂತೆ ತಡೆದು, ಜೈಲಿನಲ್ಲಿ ಕಿರುಚಾಡುತ್ತಾ ಅಧಿಕಾರಿಗಳ ಕರ್ತವ್ಯಕ್ಕೆ ತೀವ್ರ ಅಡ್ಡಿಪಡಿಸಿದ್ದಾನೆ.
ಜೈಲಿನ ಒಳಗೆ ಭದ್ರತಾ ಲೋಪ ಉಂಟುಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಒಡ್ಡಿದ ವಿಚಾರಣಾ ಬಂಧಿ ಮೊಹಮ್ಮದ್ ಪೈಜಲ್ ವಿರುದ್ಧ ಅಧೀಕ್ಷಕ ಶರಣಬಸಪ್ಪ ನೀಡಿದ ದೂರಿನಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

Share This Article
Leave a Comment