ಮಂಗಳೂರು: ಕುತ್ತಾರು ಅಪಘಾತ- ಮಿದುಳು ನಿಷ್ಕ್ರಿಯಗೊಂಡ 21 ವರ್ಷದ ಯುವಕ ವರ್ಷಿತ್ ಕುಲಾಲ್ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ.

Prakhara News
1 Min Read

ಮಂಗಳೂರು: ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಕಟ್ಟೆಯ ಬಳಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ದಾನ ಮಾಡಲು ಅವರ ಪೋಷಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಕುತ್ತಾರುವಿನ ಆಯೆರೆಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಮಿದುಳು ನಿಷ್ಕ್ರಿಯಗೊಂಡ ದುರ್ದೈವಿ. ಫ್ಯಾಬ್ರಿಕೇಷನ್ ಕೆಲಸ ಮಾಡಿಕೊಂಡಿದ್ದ ವರ್ಷಿತ್ ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಒಬ್ಬ ಸಹೋದರನನ್ನು ಅಗಲಿದ್ದಾರೆ.

ಸೋಮವಾರ ರಾತ್ರಿ ಸುಮಾರು 7:30 ರ ವೇಳೆಗೆ ವರ್ಷಿತ್ ಕುಲಾಲ್ ಅವರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿ ರಾಣಿಪುರದಿಂದ ಕುತ್ತಾರುವಿನತ್ತ ವೇಗವಾಗಿ ಧಾವಿಸುತ್ತಿದ್ದ ಸ್ಕೂಟರ್ ಹಾಗೂ ವರ್ಷಿತ್ ಅವರ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯ ಭೀಕರ ರಭಸಕ್ಕೆ ವರ್ಷಿತ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ತಕ್ಷಣವೇ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರ ಮಿದುಳು ನಿಷ್ಕ್ರಿಯಗೊಂಡಿದೆ (Brain Dead) ಎಂದು ವೈದ್ಯರು ಸ್ಪಷ್ಟಪಡಿಸಿದರು.

ಮಗನ ಮಿದುಳು ನಿಷ್ಕ್ರಿಯಗೊಂಡಿರುವ ಆಘಾತಕಾರಿ ಸತ್ಯ ತಿಳಿದ ಪೋಷಕರು, ವೈದ್ಯರ ಸಲಹೆಯಂತೆ ವರ್ಷಿತ್ ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸುವ ಮೂಲಕ ಇತರರ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ. ವರ್ಷಿತ್ ಅವರ ಮೂತ್ರಪಿಂಡ (Kidneys), ಯಕೃತ್ತು (Liver), ಹೃದಯ (Heart) ಹಾಗೂ ಶ್ವಾಸಕೋಶಗಳಿಗೆ (Lungs) ಆಸ್ಪತ್ರೆಗಳಿಂದ ಮಾಹಿತಿ ಬಂದಿದ್ದು, , ಅಂಗಾಂಗಗಳ ಕ್ಷಿಪ್ರ ರವಾನೆಗೆ ‘ಗ್ರೀನ್ ಕಾರಿಡಾರ್’ (ತಡೆರಹಿತ ವಾಹನ ಸಂಚಾರ) ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದೇ ಅಪಘಾತದಲ್ಲಿ ಸ್ಕೂಟರ್ ಸವಾರ ಧೀರಜ್ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share This Article
Leave a Comment