ಮಣಿಪಾಲ: ಕಳೆದ ವರ್ಷ ಉಡುಪಿ ಜಿಲ್ಲೆಯ ಮಣಿಪಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವತಿಗೆ ಬ್ಲ್ಯಾಕ್ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಮೇಲೆ 21 ವರ್ಷದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ದಾಂದ್ರಾ ಮತ್ತು ನಗರ್ ಹವೇಲಿ (ದಮನ್ ಮತ್ತು ದಿಯು) ಮೂಲದ ಸಾಯಿ ಸಂಜಯ್ ಬಿಂಗಾರೆ (21) ಬಂಧಿತ ಆರೋಪಿ.


ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿಯಾಗಿದ್ದ ಯುವತಿಯು ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದರು. 2025ರ ನವೆಂಬರ್ 7 ಮತ್ತು 8 ರ ಮಧ್ಯರಾತ್ರಿ ತಾವು ತಂಗಿದ್ದ ಅಪಾರ್ಟ್ಮೆಂಟ್ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಅಂತಿಮ ವರದಿ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ತದನಂತರ ಮೃತ ವಿದ್ಯಾರ್ಥಿನಿಯ ವಶದಲ್ಲಿದ್ದ ಆಪಲ್ ಐಪ್ಯಾಡ್, ಐಫೋನ್, ಡೈರಿ ಹಾಗೂ ಮೊಬೈಲ್ನ ಡಿಜಿಟಲ್ ದಾಖಲೆಗಳನ್ನು ಆಕೆಯ ತಂದೆಗೆ ಹಸ್ತಾಂತರಿಸಲಾಗಿತ್ತು.
ಮಗಳ ಡಿಜಿಟಲ್ ಸಾಧನಗಳನ್ನು ಆಕೆಯ ತಂದೆ ಕೂಲಂಕುಷವಾಗಿ ಪರಿಶೀಲಿಸಿದಾಗ, ಸಾಯಿ ಭಿಂಗೇರೆ ಅಲಿಯಾಸ್ ಸಾಯಿ ಪಾಟೀಲ್ ಎಂಬಾತನೊಂದಿಗೆ ‘ಸ್ನ್ಯಾಪ್ಚಾಟ್’ (Snapchat) ಮೂಲಕ ನಡೆಸಿರುವ ಸಂಭಾಷಣೆಗಳು ಕಂಡುಬಂದಿದ್ದವು. ಆರೋಪಿಯು ಮಗಳಿಗೆ ನಿರಂತರ ಮಾನಸಿಕ ಕಿರುಕುಳ ನೀಡಿ, ಬ್ಲ್ಯಾಕ್ಮೇಲ್ ಮಾಡುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ಶಂಕಿಸಿದ ತಂದೆ, ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆಯಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 308(5) ರಡಿ ಹೊಸ ಪ್ರಕರಣ (ಸಂಖ್ಯೆ: 90/2026) ದಾಖಲಿಸಲಾಯಿತು.

ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ತಿಮ್ಮೇಶ್ ಬಿ.ಎನ್. ನೇತೃತ್ವದ ತಂಡ ತನಿಖೆ ನಡೆಸಿ, ಸೆಪ್ಟೆಂಬರ್ 9, 2026 ರಂದು ಆರೋಪಿ ಸಾಯಿ ಸಂಜಯ್ ಬಿಂಗಾರೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.

