ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಗಾಂಜಾ ಎಸೆದ ಆರೋಪಿಯನ್ನು ಬೆನ್ನಟ್ಟಿ ಹಿಡಿದ ಭದ್ರತಾ ಸಿಬ್ಬಂದಿ

Prakhara News
2 Min Read

ಮಂಗಳೂರು : ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ ಎಸೆಯಲು ಯತ್ನಿಸಿದ ಖದೀಮನನ್ನು ಜೈಲಿನ ಭದ್ರತಾ ವಿಭಾಗದ ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿಯೊಬ್ಬರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತ ಆರೋಪಿಯಿಂದ ಗಾಂಜಾ, ಲೈಟರ್ ಹಾಗೂ ಗಾಂಜಾ ಸೇದುವ ಪೇಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಕೊಳತ್ತಮಜಲು ಕೋಳಕೇರಿ ಮೂಲದ, ಪ್ರಸ್ತುತ ಉರ್ವದಲ್ಲಿ ವಾಸವಿರುವ ತಿಲಕ್‌ರಾಜ್‌ ಬಂಧಿತ ಆರೋಪಿ. ಈ ಕೃತ್ಯದ ಹಿಂದೆ ಮೂಡುಶೆಡ್ಡೆ ನಿವಾಸಿ ಕಿರಣ್ ಹಾಗೂ ಸದ್ಯ ಕಾರಾಗೃಹದಲ್ಲಿ ಬಂಧಿಯಾಗಿರುವ ಕೈದಿ ಲಾಯ್‌ ವೇಗಸ್‌ ಕೈವಾಡ ಇರುವುದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಜುಲೈ 2ರಂದು ಮುಂಜಾನೆ 4:20ರ ಸುಮಾರಿಗೆ ಆರೋಪಿ ತಿಲಕ್‌ರಾಜ್‌ ಜೈಲಿನ ಕಾಂಪೌಂಡ್ ಗೋಡೆಯ ಹೊರಗೆ ಸಂಶಯಾಸ್ಪದವಾಗಿ ಓಡಾಡುತ್ತಾ, ಕಾರಾಗೃಹದ ಒಳಗಿರುವ ಅಡುಗೆ ಮನೆ ಪ್ರದೇಶಕ್ಕೆ ಪೊಟ್ಟಣವೊಂದನ್ನು ಎಸೆದಿದ್ದ. ಈ ಘಟನೆಯನ್ನು ಅಲ್ಲಿ ಕಾವಲು ನಿಂತಿದ್ದ ಕೆಎಸ್‌ಐಎಸ್‌ಎಫ್ ಆರ್‌ಪಿಸಿ ಕಿರಣ್‌ ತಕ್ಷಣವೇ ಗಮನಿಸಿದ್ದಾರೆ. ಕೂಡಲೇ ಅವರು ಎಎಸ್‌ಐ ಕಿರಣ್‌ ಅಂಬಿಗ ಅವರಿಗೆ ಅಲರ್ಟ್ ಸಂದೇಶ ರವಾನಿಸಿದ್ದಾರೆ. ಜೈಲು ಸಿಬ್ಬಂದಿ ತನ್ನನ್ನು ಹಿಡಿಯಲು ಬರುತ್ತಿರುವುದನ್ನು ಕಂಡ ಆರೋಪಿ ತಿಲಕ್‌ರಾಜ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಿಡದ ಸಿಬ್ಬಂದಿ ಸುಮಾರು 500 ಮೀಟರ್‌ನಷ್ಟು ದೂರ ಆತನನ್ನು ಬೆನ್ನಟ್ಟಿಕೊಂಡು ಹೋಗಿ ಅರೆಸ್ಟ್ ಮಾಡಿದ್ದಾರೆ.

ಬಳಿಕ ಕೆಎಸ್‌ಐಎಸ್‌ಎಫ್ ಪೊಲೀಸ್ ಇನ್ಸ್‌ಪೆಕ್ಟರ್ ಸುಭಾಷ್‌ ಅವರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಬಂದು ಬರ್ಕೆ ಪೊಲೀಸರ ಸಮ್ಮುಖದಲ್ಲಿ ವಿಚಾರಣೆ ಮಾಡಿದಾಗ ಜೈಲಿನೊಳಗಿನ ಡ್ರಗ್ಸ್ ಜಾಲ ಬಯಲಾಗಿದೆ. ಮೂಡುಶೆಡ್ಡೆ ನಿವಾಸಿ ಕಿರಣ್‌ ಎಂಬಾತ ತನಗೆ ಗಾಂಜಾ, ಲೈಟರ್‌ ಹಾಗೂ ರೋಲಿಂಗ್ ಪೇಪರ್ ನೀಡಿ, ಜೈಲಿನಲ್ಲಿರುವ ಲಾಯ್‌ ವೇಗಸ್‌ ಎಂಬಾತನ ಮೊಬೈಲ್ ನಂಬರ್ ಕೊಟ್ಟಿದ್ದ ಎಂದು ತಿಲಕ್‌ರಾಜ್ ಬಾಯಿಬಿಟ್ಟಿದ್ದಾನೆ. ಈ ಕೆಲಸಕ್ಕಾಗಿ ತನಗೆ ₹2,000 ಅಡ್ವಾನ್ಸ್ ನೀಡಲಾಗಿತ್ತು. ಜೈಲಿನೊಳಗಿದ್ದ ಕೈದಿ ಲಾಯ್ ವೇಗಸ್ ಫೋನ್ ಮಾಡಿ “ಕರೆಕ್ಟಾಗಿ ಅಡುಗೆ ಮನೆ ಜಾಗಕ್ಕೆ ಎಸೆ” ಎಂದು ಹೇಳಿದ್ದ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಬರ್ಕೆ ಪೊಲೀಸರು ಆರೋಪಿಗಳಾದ ತಿಲಕ್‌ರಾಜ್‌ ಮತ್ತು ಲಾಯ್‌ ವೇಗಸ್‌ ವಿರುದ್ಧ ಎನ್‌ಡಿಪಿಎಸ್‌ (NDPS) ಕಾಯ್ದೆ ಹಾಗೂ ಕರ್ನಾಟಕ ಕಾರಾಗೃಹಗಳ ತಿದ್ದುಪಡಿ ಕಾಯ್ದೆ-2022ರ ಸೆಕ್ಷನ್ 42ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

Share This Article
Leave a Comment