ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಇನ್‌ಸ್ಟಾಗ್ರಾಮ್ ಸ್ಟಾರ್ ; 17 ಕಿ.ಮೀ ಬೆನ್ನಟ್ಟಿದ ಕುಂಬ್ಳ ಪೊಲೀಸರು

Prakhara News
2 Min Read

ಕಾಸರಗೋಡು: ಇನ್‌ಸ್ಟಾಗ್ರಾಮ್‌ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು (Followers) ಹೊಂದಿರುವ ಪ್ರಸಿದ್ಧ ಜೀವನಶೈಲಿ ಮತ್ತು ಮನರಂಜನಾ ಪ್ರಭಾವಿ (Influencer) ಧನ್ಯಾ ಎಸ್‌ಆರ್ ಅಲಿಯಾಸ್ ‘ಸ್ಪಾರ್ಟಾದ ಹೆಲೆನ್’ (28) ವಿರುದ್ಧ ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ ಆರೋಪದ ಮೇಲೆ ಇಲ್ಲಿನ ಕುಂಬ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತಪಾಸಣೆಗೆ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಇನ್‌ಫ್ಲುಯೆನ್ಸರ್ ಕಾರನ್ನು ಪೊಲೀಸರು ಬರೋಬ್ಬರಿ 17 ಕಿಲೋಮೀಟರ್ ಬೆನ್ನಟ್ಟಿ ಹಿಡಿದಿದ್ದಾರೆ.

ಬುಧವಾರ ಬೆಳಗಿನ ಜಾವ 2:00 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಬಂಡಿಯೋಡ್ ಎಂಬಲ್ಲಿ ಈ ಹೈಡ್ರಾಮಾ ನಡೆದಿದ್ದು, ಧನ್ಯಾ ಚಲಾಯಿಸುತ್ತಿದ್ದ ಟಾಟಾ ಪಂಚ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುಂಬ್ಳ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್ ನೇತೃತ್ವದ ಗಸ್ತು ತಂಡವು ವಿದ್ಯಾನಗರ ಠಾಣೆಯಿಂದ ಹಿಂದಿರುಗುತ್ತಿದ್ದಾಗ, ಅನಂಗೂರು ಬಳಿಯ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲೇ ಟಾಟಾ ಪಂಚ್ ಕಾರೊಂದು ಅಪಾಯಕಾರಿಯಾಗಿ ನಿಂತಿರುವುದನ್ನು ಗಮನಿಸಿದೆ. ಪೊಲೀಸರು ವಾಹನವನ್ನು ಪರಿಶೀಲಿಸಲು ಹತ್ತಿರ ಬರುತ್ತಿದ್ದಂತೆ, ಚಾಲನಾ ಸೀಟಿನಲ್ಲಿದ್ದ ಧನ್ಯಾ ಪೊಲೀಸರ ಸೂಚನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾರನ್ನು ತೀವ್ರ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಅನುಮಾನಗೊಂಡ ಪೊಲೀಸರು ಜೀಪ್‌ನಲ್ಲಿ ಕಾರನ್ನು ಬೆನ್ನಟ್ಟಿದ್ದು, ಮಂಗಲ್ಪಾಡಿ ಗ್ರಾಮದ ಭಗವತಿ ನಗರದ ಬಳಿ 17 ಕಿ.ಮೀ ದೂರದವರೆಗೆ ಚೇಸ್ ಮಾಡಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರನ್ನು ತಡೆದಾಗ ಚಾಲಕಿ ಧನ್ಯಾ ಅವರ ಉಸಿರಾಟದಲ್ಲಿ ಮದ್ಯದ ವಾಸನೆ ಬಂದಿದೆ. ತಕ್ಷಣವೇ ಬೆಳಗಿನ ಜಾವ 2:06 ಕ್ಕೆ ಆಕೆಯನ್ನು ಬ್ರೀಥಲೈಸರ್ ಪರೀಕ್ಷೆಗೆ ಒಳಪಡಿಸಿದಾಗ ಆಲ್ಕೋಮೀಟರ್ ರೀಡಿಂಗ್ 82 ತೋರಿಸಿದೆ. ಇದು ಮೋಟಾರು ವಾಹನ ಕಾಯ್ದೆಯಡಿ ನಿಗದಿಪಡಿಸಿದ ಮಿತಿಗಿಂತ (100 ಮಿಲಿಗೆ 30 ಮಿಗ್ರಾಂ) ಎರಡು ಪಟ್ಟು ಹೆಚ್ಚು ಇರುವುದು ದೃಢಪಟ್ಟಿದೆ.
ಕಾರಿನಲ್ಲಿ ಧನ್ಯಾ ಅವರೊಂದಿಗೆ ಅವರ ಪತಿ ರಾಜೇಶ್ ಕೆ.ಆರ್. ಕೂಡ ಪ್ರಯಾಣಿಸುತ್ತಿದ್ದರು. ಅಪರಾಧದ ಸ್ವರೂಪ ಗಂಭೀರವಾಗಿದ್ದರೂ ತಕ್ಷಣದ ಬಂಧನ ಅಗತ್ಯವಿಲ್ಲದ ಕಾರಣ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಧನ್ಯಾ ವಿರುದ್ಧ ಬಿಎನ್‌ಎಸ್ ಸೆಕ್ಷನ್ 281 (ಅತಿವೇಗದ ಚಾಲನೆ) ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 132(1), 179 ಮತ್ತು 185 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಧನ್ಯಾ, “ನಾನು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದದ್ದು ನಿಜ. ಪೊಲೀಸರನ್ನು ನೋಡಿ ಗೊಂದಲಕ್ಕೊಳಗಾಗಿ ಮನೆ ಕಡೆಗೆ ಕಾರು ಚಲಾಯಿಸಿದೆ ಅಷ್ಟೇ. ಪೊಲೀಸರು ನನ್ನೊಂದಿಗೆ ಅತ್ಯಂತ ಸಭ್ಯತೆಯಿಂದ ನಡೆದುಕೊಂಡರು. ಆದರೆ ಕೆಲವು ಮಾಧ್ಯಮಗಳು ನಾನು ಎಂಡಿಎಂಎ (MDMA) ಡ್ರಗ್ಸ್ ತಗೊಂಡಿದ್ದೆ ಅಂತ ಸುಳ್ಳು ವರದಿ ಮಾಡ್ತಿವೆ. ಇದಕ್ಕಾಗಿಯೇ ನಾನು ಸ್ವಯಂಪ್ರೇರಣೆಯಿಂದ ಮಿಮ್ಸ್ (MIMS) ಆಸ್ಪತ್ರೆಯಲ್ಲಿ ರಕ್ತದ ಮಾದರಿ ಪರೀಕ್ಷೆ ನೀಡಿದ್ದು, ರಿಪೋರ್ಟ್ ಬಂದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತೀನಿ” ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment