ವಿಟ್ಲ: ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಢಿಕ್ಕಿ – ತುಂಡಾಗಿ ಬಸ್ಸಿನ ಮೇಲೆ ಬಿದ್ದ ಕಂಬ, 15ಕ್ಕೂ ಹೆಚ್ಚು ಮಕ್ಕಳು ಪವಾಡಸದೃಶ ಪಾರು..!

Prakhara News
1 Min Read

ವಿಟ್ಲ : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ವಿಟ್ಲಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್ಸು ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಯತ್ತ ತೆರಳುತ್ತಿತ್ತು. ಕುಂಟುಕುಡೇಲು ತಲುಪುತ್ತಿದ್ದಂತೆ ಇಳಿಜಾರಿನ ರಸ್ತೆಯಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ರಸ್ತೆ ಬಿಟ್ಟು ಕೆಳಗಿಳಿದು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಸ್ಸಿನ ಮೇಲೆಯೇ ಬಿದ್ದಿದೆಯಾದರೂ, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಬಸ್ಸಿನಲ್ಲಿದ್ದ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶ ರೀತಿಯಲ್ಲಿ ಸಂಪೂರ್ಣ ಸುರಕ್ಷಿತವಾಗಿ ಪಾರಾಗಿದ್ದಾರೆ.ಅಪಘಾತದಿಂದಾಗಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಓಡಿ ಬಂದು ಬಸ್ಸಿನಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.

Share This Article
Leave a Comment