ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದೆ. ನಿರಂತರ ಮಳೆಗೆ ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿದು ಬಿದ್ದಿದೆ.


ಗಾಳಿ-ಮಳೆ ಹೆಚ್ಚಾದಂತೆ ರಸ್ತೆ ಬದಿಯ ಗುಡ್ಡದ ಮಣ್ಣು ಬೀಳುತ್ತಿದೆ. ಈಗಾಗಲೇ ಮರಗಳು ಸಹ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳ-ಮಂಗಳೂರು – ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಉರುಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ.

ಮಳೆ ಮುಂದುವರಿಯುತ್ತಿರುವುದರಿಂದ ಸ್ವಲ್ಪ ಸ್ವಲ್ಪವೇ ಮಣ್ಣು ಜಾರುತ್ತಿದ್ದು, ತೆರವು ಕಾರ್ಯ ಸವಾಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಮಳೆ ಹೆಚ್ಚಾದಂತೆಲ್ಲ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದೆ.



