ಉಡುಪಿ: ಬ್ಯಾಂಕ್‌ ಅಧಿಕಾರಿ ಹೆಸರಿನಲ್ಲಿ KYC ಅಪ್ ಡೇಟ್ ನೆಪದಲ್ಲಿ APK ಫೈಲ್ ಕಳುಹಿಸಿ ₹17.50 ಲಕ್ಷ ವಂಚನೆ..!

Prakhara News
2 Min Read

ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವಾಟ್ಸಾಪ್ ಮೂಲಕ ‘APK ಫೈಲ್’ ಕಳುಹಿಸಿ, ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಉಡುಪಿಯ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹17,50,000 ಹಣವನ್ನು ಸೈಬರ್ ಕಳ್ಳರು ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಕುಕ್ಕಿಕಟ್ಟೆ ನಿವಾಸಿ ಅಜಯ್ ಜಗದೀಶ್ ನೀಡಿದ ದೂರಿನ ಮೇರೆಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರ ಅಜಯ್ ಜಗದೀಶ್ ಅವರಿಗೆ ಆಗಸ್ಟ್ 27, 2026 ರಂದು ಸಂಜೆ 4:15 ರ ಸುಮಾರಿಗೆ +91 9315675768 ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿತ್ತು. ತಾನು ‘ಸೌತ್ ಇಂಡಿಯನ್ ಬ್ಯಾಂಕ್’ ನ ಪ್ರತಿನಿಧಿ ‘ಶಿವಕುಮಾರ್’ ಎಂದು ಪರಿಚಯಿಸಿಕೊಂಡಿದ್ದ ಸೈಬರ್ ವಂಚಕ, ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಬೇಕೆಂದು ಹೇಳಿ ಒಂದು APK ಫೈಲ್ ಮತ್ತು ಲಿಂಕ್ ಕಳುಹಿಸಿದ್ದನು.

ಅದನ್ನು ನಿಜವೆಂದು ನಂಬಿದ ಅಜಯ್, ವಂಚಕ ಸೂಚಿಸಿದ ಲಿಂಕ್ ತೆರೆದು ತಮ್ಮ ಸೌತ್ ಇಂಡಿಯನ್ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಗೌಪ್ಯ ವಿವರಗಳನ್ನು ಭರ್ತಿ ಮಾಡಿದ್ದಾರೆ.

ಖಾತೆಯ ವಿವರ ಪಡೆದ ಬಳಿಕ, ದೈನಿಕ ವಹಿವಾಟಿನ ಪರಿಮಿತಿ (Daily Limit) ಹೆಚ್ಚಿಸಲು ಹಣ ವರ್ಗಾವಣೆ ಮಾಡಬೇಕು ಎಂದು ವಂಚಕ ನಂಬಿಸಿದ್ದಾನೆ. ಇದಕ್ಕಾಗಿ ಅಜಯ್ ಅವರ ಐಸಿಐಸಿಐ (ICICI) ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ಸೆಪ್ಟೆಂಬರ್ 2, 2026 ರಂದು ಹಂತ-ಹಂತವಾಗಿ ಅಜಯ್ ಅವರ ಐಸಿಐಸಿಐ ಬ್ಯಾಂಕ್ ಖಾತೆಯಿಂದ ವಿವಿಧ ಅಪರಿಚಿತ ಫಲಾನುಭವಿಗಳ (Beneficiary) ಖಾತೆಗಳಿಗೆ ಬರೋಬ್ಬರಿ ₹17.50 ಲಕ್ಷ ಹಣ ವರ್ಗಾಯಿಸಿಕೊಂಡು ಸೈಬರ್ ಖದೀಮರು ಮಹಾ ವಂಚನೆ ಎಸಗಿದ್ದಾರೆ.

ತಾನು ಸೈಬರ್ ದರೋಡೆಗೆ ಒಳಗಾಗಿರುವುದನ್ನು ಅರಿತ ಸಂತ್ರಸ್ತ ಅಜಯ್ ಜಗದೀಶ್ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಅಪರಾಧ ಕ್ರಮಾಂಕ 36/2026 ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಯ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 319(2), 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

Share This Article
Leave a Comment