ಮಂಗಳೂರಿನ ಸೆಂಟ್ ತೆರೇಸಾ ಶಾಲೆಯಲ್ಲಿ ಎಐ ರೋಬೋಟ್ ‘ಐರಿಸ್’ ಪಾಠ!

Prakhara News
1 Min Read

ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಹೊಸ ಕ್ರಾಂತಿಗೆ ಮಂಗಳೂರಿನ ಬೆಂದೂರುವೆಲ್‌ನಲ್ಲಿರುವ ಸೆಂಟ್ ತೆರೇಸಾ ಐಸಿಎಸ್‌ಇ ಶಾಲೆ ಮುನ್ನುಡಿ ಬರೆದಿದೆ. ಸಾಂಪ್ರದಾಯಿಕ ಬೋಧನಾ ಪದ್ಧತಿಗೆ ಕೃತಕ ಬುದ್ಧಿಮತ್ತೆಯ (AI) ಸ್ಪರ್ಶ ನೀಡಿರುವ ಈ ಶಾಲೆ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ‘ಐರಿಸ್’ (IRIS) ಹೆಸರಿನ ರೋಬೋಟ್ ಶಿಕ್ಷಕಿಯನ್ನು ಬೋಧನೆಗಾಗಿ ಸೇರ್ಪಡೆಗೊಳಿಸಿ ಇತಿಹಾಸ ನಿರ್ಮಿಸಿದೆ.

ಭಾರತೀಯ ಸಾಂಪ್ರದಾಯಿಕ ಸೀರೆ ಉಟ್ಟು ಗಮನಸೆಳೆಯುವ ಈ ‘ಐರಿಸ್’ ಕೇವಲ ನಿರ್ಜೀವ ಯಂತ್ರ ಅಥವಾ ಸ್ಪೀಕರ್ ಡಿವೈಸ್ ಅಲ್ಲ. ತನ್ನ ಎದುರು ನಿಲ್ಲುವ ವಿದ್ಯಾರ್ಥಿಗಳನ್ನು ಗುರುತಿಸಿ ನಗುಮುಖದಿಂದ ಕಣ್ಣು ಮಿಟುಕಿಸುತ್ತಾ ‘ಹಲೋ’ ಎಂದು ಸ್ವಾಗತಿಸುತ್ತದೆ. ಹತ್ತಿರ ಬಂದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೈ ಕುಲುಕಿ (Handshake) ಆತ್ಮೀಯತೆ ವ್ಯಕ್ತಪಡಿಸುತ್ತದೆ. 1 ರಿಂದ 11 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಇದನ್ನು ಪ್ರೋಗ್ರಾಮ್ ಮಾಡಲಾಗಿದೆ.

‘ಐರಿಸ್’ ರೋಬೋಟ್‌ಗೆ ಸುಧಾರಿತ ಚಾಟ್ ಜಿಪಿಟಿ (ChatGPT) ತಂತ್ರಜ್ಞಾನ ಮತ್ತು ಪ್ರೊಸೆಸರ್‌ಗಳನ್ನು ಜೋಡಿಸಲಾಗಿದ್ದು, ಇಂಟರ್ನೆಟ್‌ಗೆ ಸಂಪರ್ಕಗೊಂಡಿರುತ್ತದೆ. ‘ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್’ ತಂತ್ರಜ್ಞಾನ ಹೊಂದಿರುವ ಈ ರೋಬೋಟ್ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಕೇವಲ 2 ರಿಂದ 3 ಸೆಕೆಂಡುಗಳಲ್ಲಿ ನಿಖರ ಉತ್ತರ ನೀಡುತ್ತದೆ. ಪ್ರಚಲಿತ ವಿದ್ಯಮಾನ, ಬಾಹ್ಯಾಕಾಶ, ವಿಜ್ಞಾನ ಹಾಗೂ ಗಣಿತದ ಸಂಕೀರ್ಣ ಸೂತ್ರಗಳಿಗೆ ಪರೀಕ್ಷಾ ದೃಷ್ಟಿಕೋನದ ತಾಂತ್ರಿಕ ವ್ಯಾಖ್ಯಾನಗಳನ್ನು ಇದು ನೀಡುತ್ತದೆ.

ಸೆಂಟ್ ತೆರೇಸಾ ಶಾಲೆ ಮೂರು ವರ್ಷಗಳ ಹಿಂದೆಯೇ ಎಐ ಲ್ಯಾಬ್ ಪ್ರಾರಂಭಿಸಿ ತಂತ್ರಜ್ಞಾನಕ್ಕೆ ಒತ್ತು ನೀಡಿತ್ತು. ಇದೀಗ ಐರಿಸ್ ಸೇರ್ಪಡೆಯಿಂದ ಈ ಲ್ಯಾಬ್ ಮತ್ತಷ್ಟು ಬಲಗೊಂಡಿದೆ. 1 ರಿಂದ 11ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಎಐ ಲ್ಯಾಬ್‌ಗೆ ಭೇಟಿ ನೀಡಿ ರೋಬೋಟ್ ಜೊತೆ ಸಂವಹನ ನಡೆಸಲು ಪ್ರತ್ಯೇಕ ಅವಧಿ ಮೀಸಲಿಡಲಾಗಿದೆ. ಮಾನವ ಶಿಕ್ಷಕರ ಪ್ರಾಯೋಗಿಕ ಉದಾಹರಣೆಗಳು ಹಾಗೂ ಎಐ ಶಿಕ್ಷಕಿಯ ತಾಂತ್ರಿಕ ವ್ಯಾಖ್ಯಾನಗಳು ಸೇರಿ ಮಂಗಳೂರಿನ ಸೆಂಟ್ ತೆರೇಸಾ ಶಾಲೆ ಜ್ಞಾನಾರ್ಜನೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.

Share This Article
Leave a Comment