ಹಣವಂತರೇ ಈಕೆಯ ಟಾರ್ಗೆಟ್: ಸ್ನೇಹದ ನಾಟಕವಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕಿರುತೆರೆ ನಟಿ ಬಂಧನ

Prakhara News
1 Min Read

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಮಂತರನ್ನು ಪರಿಚಯ ಮಾಡಿಕೊಂಡು, ಸ್ನೇಹದ ನಾಟಕವಾಡಿ ಬಳಿಕ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾ ಅವರನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ನಟಿ ವನಿತಾ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ತಾನು ಕಿರುತೆರೆ ನಟಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ನಿರಂತರವಾಗಿ ಮಾತನಾಡಿ ನಂಬಿಕೆ ಗಳಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾದ ಸ್ನೇಹಿತರ ಬಳಿ ತಾನು ತೀವ್ರ ಕಷ್ಟದಲ್ಲಿದ್ದೇನೆ ಎಂದು ನಂಬಿಸುತ್ತಿದ್ದ ನಟಿ ವನಿತಾ, ‘ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ. ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ನೀಡುತ್ತೇನೆ’ ಎಂದು ನಂಬಿಸಿ ಹಣ ಪಡೆಯುತ್ತಿದ್ದಳು. ಅತ್ಯಂತ ಚಾಲಾಕಿಯಾಗಿದ್ದ ಈಕೆ, ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಗಳನ್ನು ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಂಡು ನಗದು ಪಡೆದು ಪರಾರಿಯಾಗುತ್ತಿದ್ದಳು ಎಂದು ಆರೋಪಿಸಲಾಗಿದೆ.

ಒಮ್ಮೆ ಕೈಗೆ ಹಣ ಸಿಗುತ್ತಿದ್ದಂತೆ ನಟಿ ವನಿತಾ ತನ್ನ ಅಸಲಿ ರೂಪ ತೋರಿಸುತ್ತಿದ್ದಳು. ಹಣ ಕೊಟ್ಟವರು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸುತ್ತಿಲ್ಲವೆಂದು ಮೆಸೇಜ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ವಂಚಿಸುತ್ತಿದ್ದಳು ಎನ್ನಲಾಗಿದೆ.

ಇದೇ ರೀತಿ ಈ ನಟಿಯನ್ನು ನಂಬಿ ಹಣ ಕಳೆದುಕೊಂಡ ಯುವಕನೊಬ್ಬ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಕೆಯ ವಂಚನೆಯ ಜಾಲ ಕೇವಲ ಒಂದು ಠಾಣೆಗೆ ಸೀಮಿತವಾಗಿರಲಿಲ್ಲ. ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಈಕೆಯ ವಿರುದ್ಧ ಈ ಹಿಂದೆ ಹಲವು ದೂರುಗಳು ದಾಖಲಾಗಿದ್ದವು.

ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿ, ವಂಚಕಿ ಕಿರುತೆರೆ ನಟಿ ವನಿತಾಳನ್ನು ಜೈಲಿಗಟ್ಟಿದ್ದಾರೆ. ಈಕೆಯ ಜಾಲಕ್ಕೆ ಬಿದ್ದಿರುವ ಇನ್ನೂ ಹಲವು ಸಂತ್ರಸ್ತರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Share This Article
Leave a Comment