ಕಾಮಗಾರಿ ನಮ್ಮದು, ಫೋಟೋ ನಿಮ್ಮದು! – ಕಾಂಗ್ರೆಸ್ ನಾಯಕರ ‘ಕ್ರೆಡಿಟ್ ರಾಜಕಾರಣ’ಕ್ಕೆ ಶಾಸಕ ವೇದವ್ಯಾಸ ಕಾಮತ್‌ ಕೆಂಡಾಮಂಡಲ!

Prakhara News
1 Min Read

ಮಂಗಳೂರು : ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅನುಸರಿಸುತ್ತಿರುವ “ಕ್ರೆಡಿಟ್ ರಾಜಕಾರಣ” ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ದಾಖಲೆ ಸಮೇತ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ಅಟಲ್ ಸೇವಾ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಗೆಸ್ಟ್ ಉಸ್ತುವಾರಿ ಸಚಿವರು ಎರಡು-ಮೂರು ತಿಂಗಳಿಗೊಮ್ಮೆ ಜಿಲ್ಲೆಗೆ ಬರುತ್ತಾರೆಯೇ ಹೊರತು, ಕಳೆದ ಎರಡು ಮುಕ್ಕಾಲು ವರ್ಷಗಳಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರನ್ನು ಕರೆದು ಒಮ್ಮೆಯೂ ಸಭೆ ನಡೆಸುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಕೇವಲ ತಮ್ಮ ಪಾರ್ಟಿ ನಾಯಕರ ರಾಜಕೀಯಕ್ಕೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಶಾಸಕರು, ಕಾಂಗ್ರೆಸ್‌ನವರ ಇಂತಹ ಮಾನಸಿಕತೆ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನಿಸಿದರು.

ಸುಮಾರು 25 ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಕೊಡಿಯಾಲ್‌ ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್‌ಗೆ ಸಂಪರ್ಕಿಸುವ ಪಂಪಿಂಗ್ ಕೊಳವೆ ಮಾರ್ಗ ಒಡೆದು ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿತ್ತು. ಈ ಗಂಭೀರ ಸಮಸ್ಯೆಯನ್ನು ಅಂದಿನ ಮೇಯರ್ ಸುಧೀರ್ ಶೆಟ್ಟಿ ಅವರು ನನ್ನ ಗಮನಕ್ಕೆ ತಂದಾಗ, ನಾನು ಮನಪಾ ಕಮೀಷನ‌ರ್ ಹಾಗೂ ಕೆಐಡಿಎಫ್‌ಸಿ ಅಧಿಕಾರಿಗಳ ಸಭೆ ನಡೆಸಿ 3.47 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೆ. ಜಿಲ್ಲಾಧಿಕಾರಿಗಳು ಅನುದಾನ ನೀಡಲು ಹಿಂದೇಟು ಹಾಕಿದಾಗ, ನಾನು ಮತ್ತು ಸುಧೀರ್ ಶೆಟ್ಟಿಯವರು ಆ ಭಾಗದ 25 ನಿವಾಸಿಗಳನ್ನು ಜಿಲ್ಲಾಧಿಕಾರಿಗಳ ಬಳಿ ಕರೆದೊಯ್ದು ಮನವರಿಕೆ ಮಾಡಿದ ನಂತರವೇ ಯೋಜನೆಗೆ ಅನುಮೋದನೆ ಸಿಕ್ಕಿತ್ತು.

ಆದರೆ, ಈಗ ಕಾಮಗಾರಿ ಆರಂಭವಾಗುವ ಹಂತದಲ್ಲಿ ಎಂ.ಎಲ್.ಸಿ ಐವನ್ ಡಿಸೋಜಾ ಮತ್ತು ಕಾಂಗ್ರೆಸ್ ನಾಯಕರು, ಬಿಜೆಪಿಯವರು ಮಾಡಿಸಿದ ಕೆಲಸವನ್ನು ತಾವೇ ಮಾಡಿದ್ದು ಎಂದು ತೋರಿಸಿಕೊಳ್ಳಲು ಮಾಧ್ಯಮಗಳ ಮುಂದೆ ಉಸ್ತುವಾರಿ ಸಚಿವರ ವಿಶೇಷ ಸ್ಥಳ ಭೇಟಿಯ ನಾಟಕವಾಡುತ್ತಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಅಧಿಪತಿಗಳಾಗುವ ಹಪಾಹಪಿ ಕಾಂಗ್ರೆಸ್‌ನವರಿಗೆ ಏಕಿದೆ ಎಂದು ಅವರು ಪ್ರಶ್ನಿಸಿದರು.

Share This Article
Leave a Comment