ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಸಮೀಪ ಖಾಸಗಿ ಶಾಲೆಯ ಬಸ್ ಮೇಲೆ ಬೃಹತ್ ಗಾತ್ರದ ಮರ ಏಕಾಏಕಿ ಉರುಳಿಬಿದ್ದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಈ ಪೈಕಿ ಮೂವರು ಗಂಭೀರವಾಗಿವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.


ಕಲ್ಲಡ್ಕದ ಖಾಸಗಿ ಶಾಲೆಗೆ ಸೇರಿದ ಬಸ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಬಸ್ ಮೇಲೆ ಉರುಳಿಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಬಾಗಕ್ಕೆ ಹಾನಿಯಾಗಿದ್ದು, ಒಳಗಿದ್ದ ವಿದ್ಯಾರ್ಥಿಗಳಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಬಸ್ಸಿನಲ್ಲಿ ಒಟ್ಟು 32 ವಿದ್ಯಾರ್ಥಿಗಳು ಸಂಚಾರಿಸುತ್ತಿದ್ದು ಈ ಪೈಕಿ ಕೆಲವರನ್ನು ಡ್ರಾಪ್ ಮಾಡಲಾಗಿದ್ದು.

ಅಪಘಾತದ ವೇಳೆ ಬಸ್ಸಿನಲ್ಲಿ ಅಂದಾಜು 25 ಮಂದಿ ವಿದ್ಯಾರ್ಥಿಗಳು ಇದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮರವನ್ನು ತೆರವುಗೊಳಿಸಿ ಗಾಯಾಳುಗಳನ್ನು ಮಂಗಳೂರು ಸಹಿತ ವಿವಿಧ ಆಸ್ಪತ್ರೆಗೆ ದಾಖಲಿಸಿದ್ದಾರೆ.



